ಅಧಿಕಾರಿಗೆ ಕಪಾಳಮೋಕ್ಷದ ಬೆದರಿಕೆ; ಸಚಿವೆಯ ವೀಡಿಯೊ ಹಂಚಿಕೊಂಡ ಮಹಾರಾಷ್ಟ್ರ ಶಾಸಕ
ಘಟನೆಯನ್ನು ಲಘುವಾಗಿ ಪರಿಗಣಿಸಿದ ಸಿಎಂ ಫಡ್ನವೀಸ್!

PC : @RRPSpeaks
ಮುಂಬೈ,ಆ.4: ಮಹಾರಾಷ್ಟ್ರದ ಸಚಿವೆ ಮೇಘನಾ ಬೋರ್ಡಿಕರ್ ಅವರು ಪರ್ಭಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗ್ರಾಮಾಧಿಕಾರಿಗೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆಯೊಡ್ಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿರುವ ಎನ್ಸಿಪಿ(ಎಸ್ಪಿ) ಶಾಸಕ ರೋಹಿತ ಪವಾರ ಅವರು ಸಚಿವೆಯ ವರ್ತನೆಯನ್ನು ಟೀಕಿಸಿದ್ದಾರೆ.
ಘಟನೆಯನ್ನು ಲಘುವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸಚಿವರ ಪ್ರತಿಯೊಂದೂ ಹೇಳಿಕೆಯನ್ನು ಉತ್ಪ್ರೇಕ್ಷಿಸಬಾರದು ಎಂದು ಹೇಳಿದ್ದಾರೆ.
ಸದನದಲ್ಲಿ ರಮ್ಮಿ ಆಡುವವರು, ಚೀಲಗಳಲ್ಲಿ ಹಣ ತುಂಬುವವರು, ಡ್ಯಾನ್ಸ್ ಬಾರ್ಗಳನ್ನು ನಡೆಸುವವರು ಮೊದಲು ತಪ್ಪುಗಳನ್ನು ಮಾಡುತ್ತಾರೆ ಮತ್ತು ನಂತರ ಅವುಗಳನ್ನು ವೈಭವೀಕರಿಸಲು ಪ್ರಯತ್ನಿಸುತ್ತಾರೆ. ಸಚಿವೆ ಕಾರ್ಯಕ್ರಮದಲ್ಲಿ ಅಧಿಕಾರಿಗೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆಯೊಡ್ಡಿದ್ದು ಇದಕ್ಕೆ ಹೊಸ ಸೇರ್ಪಡೆಯಾಗಿದೆ ಎಂದು ಪವಾರ್ ರವಿವಾರ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸಚಿವೆಯ ವೀಡಿಯೊವನ್ನು ಹಂಚಿಕೊಂಡಿರುವ ಅವರು, ವಸತಿ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಗುರಿಯನ್ನು ಸಾಧಿಸಲು ವಿಫಲಗೊಂಡಿದ್ದಕ್ಕಾಗಿ ಗ್ರಾಮ ಸೇವಕರಿಗೆ ಕಪಾಳಮೋಕ್ಷದ ಬೆದರಿಕೆಯೊಡ್ಡಿದ ಸಚಿವೆಯ ವರ್ತನೆಯನ್ನು ಪ್ರಶ್ನಿಸಿದ್ದಾರೆ.
‘ಮುಖ್ಯಮಂತ್ರಿಗಳೇ, ಎಂತಹ ‘ಸಜ್ಜನ’ ಮಂತ್ರಿಗಳನ್ನು ನೀವು ನೇಮಿಸಿಕೊಂಡಿದ್ದೀರಿ? ನಿಮ್ಮ ಸಂಪುಟದ ವರ್ಚಸ್ಸಿಗೆ ಹಾನಿಯಾಗಿದೆ. ಮುಖ್ಯವಾಗಿ ಮಹಾರಾಷ್ಟ್ರದ ಘನತೆಗೆ ಧಕ್ಕೆಯುಂಟಾಗುತ್ತಿದೆ. ದಯವಿಟ್ಟು ಅವರನ್ನು ನಿಯಂತ್ರಿಸಿ’ ಎಂದು ಪವಾರ್ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೋರ್ಡಿಕರ್, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತನ್ನ ವೀಡಿಯೋ ತುಣುಕನ್ನು ಎಡಿಟ್ ಮಾಡಲಾಗಿದೆ. ಇಂತಹ ತುಣುಕುಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸಲು ಯಾರೂ ಪ್ರಯತ್ನಿಸಬಾರದು ಎಂದು ಹೇಳಿದರು.
‘ನಾನು ಜನರ ಹಿತದೃಷ್ಟಿಯಿಂದ ಮಾತನಾಡಿದ್ದೆ. ನಾನು ಜಿಲ್ಲಾ ಪರಿಷತ್ ಅಧಿಕಾರಿಗಳ ಮುಂದೆ ಮಾತನಾಡುವಾಗ ಓರ್ವ ಸಿಬ್ಬಂದಿ ತನ್ನ ಕೆಲಸದಲ್ಲಿ ಸುಧಾರಣೆ ತಂದುಕೊಳ್ಳದ ಬಗ್ಗೆ ಉಲ್ಲೇಖಿಸಿದ್ದೆ. ನಿಮ್ಮ ಮಾತನ್ನು ಯಾರಾದರೂ ಕೇಳದಿದ್ದರೆ ಅವರಿಗೆ ಅರ್ಥವಾಗುವ ಭಾಷೆ ಮತ್ತು ಧಾಟಿಯಲ್ಲಿ ಮಾತನಾಡಬೇಕು’ ಎಂದರು.







