ಕಿರುಕುಳದಿಂದ ಮನನೊಂದು ವ್ಯಾಪಾರಿ ಆತ್ಮಹತ್ಯೆ ಆರೋಪ : ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಅಲ್ಪಸಂಖ್ಯಾತರ ಆಯೋಗ

ಸಾಂದರ್ಭಿಕ ಚಿತ್ರ
ಮುಂಬೈ: ಸಹ ವರ್ತಕರ ಕಿರುಕುಳದಿಂದ ಮನನೊಂದು ಬಾಂದಾದ 38 ವರ್ಷದ ಮುಸ್ಲಿಂ ಸಮುದಾಯಕ್ಕೆ ಸೇರಿದ ಹೂ ವ್ಯಾಪಾರಿವೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ಸಿಂಧುದುರ್ಗ್ ಜಿಲ್ಲಾ ಪೊಲೀಸರಿಗೆ ಮಹಾರಾಷ್ಟ್ರ ಅಲ್ಪಸಂಖ್ಯಾತರ ಆಯೋಗ ನಿರ್ದೇಶನ ನೀಡಿದೆ.
ಅಫ್ತಾಬ್ ಶೇಖ್ ಎಂಬ ವರ್ತಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ, ನನಗೆ ಗ್ರಾಮದ ಐವರು ವರ್ತಕರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೊಬೈಲ್ ನಲ್ಲಿ ವಿಡಿಯೊವೊಂದನ್ನು ಚಿತ್ರೀಕರಿಸಿದ್ದ. ಆ ವಿಡಿಯೊವನ್ನು ಅವರ ಕುಟುಂಬದ ಸದಸ್ಯರು ಪತ್ತೆ ಹಚ್ಚಿದ್ದರು.
ಆರೋಪಿಗಳ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳಿದ್ದರೂ, ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೆ ಶೇಖ್ ಅವರ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಬಾಂದಾ ಮುಸ್ಲಿಂ ವಾಡಿಯ ನಿವಾಸಿಯಾದ ಅಫ್ತಾಬ್ ಶೇಖ್, ಅಕ್ಟೋಬರ್ 29ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
"ಸ್ಥಳೀಯ ವರ್ತಕರ ಪದೇ ಪದೇ ಬೆದರಿಕೆಯಿಂದ ಅಫ್ತಾಬ್ ಶೇಖ್ ಕಳೆದ ಎಂಟು ತಿಂಗಳಿನಿಂದ ಹೂ ಮಾರಾಟ ಮಳಿಗೆಯನ್ನು ತೆರೆದಿರಲಿಲ್ಲ. ಆತನಿಗೆ ಹೂ ಮಾರಾಟ ಮಳಿಗೆಯನ್ನು ತೆರೆಯಲು ಸ್ಥಳೀಯ ವರ್ತಕರು ಅವಕಾಶ ನೀಡಿರಲಿಲ್ಲ" ಎಂದು ಮೃತ ಅಫ್ತಾಬ್ ಶೇಖ್ ತಾಯಿ ಆರೋಪಿಸಿದ್ದಾರೆ.







