ಮಹಾರಾಷ್ಟ್ರ ಮುನ್ಸಿಪಲ್ ಚುನಾವಣೆಗಳು: ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ ಉವೈಸಿಯ ಎಐಎಂಐಎಂ; ಇಮ್ಮಡಿಗೊಂಡ ಬಲ

ಅಸದುದ್ದೀನ್ ಉವೈಸಿ | Photo Credit ; PTI
ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿನ ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ತನ್ನ ಕಾರ್ಪೊರೇಟರ್ಗಳ ಬಲವನ್ನು ಬಹುತೇಕ ದ್ವಿಗುಣಗೊಳಿಸಿಕೊಂಡಿದ್ದು,ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ.
ಎಐಎಂಐಎಂ ರಾಜ್ಯಾದ್ಯಂತ 29 ಮನಪಾಗಳ ಪೈಕಿ ಸ್ಪರ್ಧಿಸಿದ್ದ 12 ಕಡೆಗಳಲ್ಲಿ ಒಟ್ಟು 114 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಮುನ್ಸಿಪಲ್ ಚುನಾವಣೆಗಳಲ್ಲಿ ಅದು ಗಳಿಸಿದ್ದ 48 ಸ್ಥಾನಗಳಿಗೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದೆ.
ಪಕ್ಷವು ಛತ್ರಪತಿ ಸಂಭಾಜಿನಗರದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ. ಅಲ್ಲಿ 33 ಸ್ಥಾನಗಳನ್ನು ಗೆದ್ದಿರುವ ಎಐಎಂಐಎಂ ಮುನ್ಸಿಪಲ್ ಚುನಾವಣೆಗಳಲ್ಲಿ ತಾನು ಪ್ರಮುಖ ಶಕ್ತಿ ಎನ್ನುವುದನ್ನು ಸಾಬೀತುಗೊಳಿಸಿದೆ. ಅದು ಮಾಲೆಗಾಂವ್ನಲ್ಲಿ 21,ನಾಂದೇಡ್ನಲ್ಲಿ 13,ಅಮರಾವತಿಯಲ್ಲಿ 15, ಧುಲೆಯಲ್ಲಿ 10 ಮತ್ತು ಸೊಲ್ಲಾಪುರದಲ್ಲಿ ಎಂಟು ಸ್ಥಾನಗಳನ್ನು ಗಳಿಸಿದೆ.
ಪಕ್ಷವು ಮುಂಬೈ ಮಹಾನಗರ ಪ್ರದೇಶದಲ್ಲಿ ಸಣ್ಣ, ಆದರೆ ರಾಜಕೀಯವಾಗಿ ಗಮನಾರ್ಹ ಗಳಿಕೆಯನ್ನು ಸಾಧಿಸಿದೆ. ಮುಂಬೈನಲ್ಲಿ ಆರು ಮತ್ತು ಥಾಣೆಯಲ್ಲಿ ಐದು ಸ್ಥಾನಗಳನ್ನು ಅದು ಗೆದ್ದಿದೆ.
ಪಕ್ಷವು ಅಕೋಲಾದಲ್ಲಿ ಮೂರು, ಅಹ್ಮದ್ನಗರ ಮತ್ತು ಜಾಲ್ನಾಗಳಲ್ಲಿ ತಲಾ ಎರಡು ಹಾಗೂ ಚಂದ್ರಾಪುರ ಮತ್ತು ಪರ್ಭನಿಯಲ್ಲಿ ತಲಾ ಒಂದು ಸ್ಥಾನಗಳನ್ನೂ ಗಳಿಸಿದೆ.
2012ರಲ್ಲಿ 81 ಸದಸ್ಯಬಲದ ನಾಂದೇಡ್ ಮಹಾನಗರ ಪಾಲಿಕೆಯಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಎಐಎಂಐಎಂ ಮಹಾರಾಷ್ಟ್ರದಲ್ಲಿ ತನ್ನ ಮೊದಲ ಚುನಾವಣಾ ಗೆಲುವನ್ನು ದಾಖಲಿಸಿತ್ತು. ಅದು ತೆಲಂಗಾಣದ ಹೊರಗಿನ ರಾಜ್ಯದಲ್ಲಿ ಪಕ್ಷದ ಚೊಚ್ಚಲ ವಿಜಯವೂ ಆಗಿತ್ತು.
ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಗಣನೀಯ ಆಂತರಿಕ ಪ್ರಕ್ಷುಬ್ಧತೆ ಮತ್ತು ತುಲನಾತ್ಮಕವಾಗಿ ಮಂದಗತಿಯ ಪ್ರಚಾರದ ಹೊರತಾಗಿಯೂ ಎಐಎಂಐಎಂ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ. ಮತದಾನಕ್ಕೆ ಕೆಲವೇ ದಿನಗಳ ಮೊದಲು ಪಕ್ಷದ ಮುಂಬೈ ಘಟಕದ ಅಧ್ಯಕ್ಷ ಫಾರೂಕ್ ಶಾಬ್ದಿ ರಾಜೀನಾಮೆ ನೀಡಿದ್ದರೆ, ರಾಜ್ಯ ಘಟಕದ ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಅವರು ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬೆದರಿಕೆಗಳನ್ನು ಎದುರಿಸಿದ್ದರು. ಇದು ಚುನಾವಣೆಗಳ ಮುನ್ನ ಪಕ್ಷದಲ್ಲಿಯ ಗುಂಪುಗಾರಿಕೆಯನ್ನು ಎತ್ತಿ ತೋರಿಸಿತ್ತು.
ಹಲವಾರು ನಗರ ಕೇಂದ್ರಗಳಲ್ಲಿ ಮುಸ್ಲಿಮ್ ಮತಗಳನ್ನೇ ನಂಬಿಕೊಂಡಿದ್ದ ಸಮಾಜವಾದಿ ಪಾರ್ಟಿಯ ದುರ್ಬಲ ಪ್ರದರ್ಶನದ ಸಮಯದಲ್ಲೇ ಎಐಎಂಐಎಂ ಉತ್ತಮ ಸಾಧನೆಯನ್ನು ತೋರಿಸಿದೆ.
ಕುತೂಹಲಕಾರಿಯಾಗಿ ಎಐಎಂಐಎಂ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮತ್ತು ಎನ್ಸಿಪಿ (ಎಸ್ಪಿ)ಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.







