ಮೂರನೆಯ ಭಾಷಾ ಅಧಿಸೂಚನೆಯನ್ನು ಪರಿಷ್ಕರಿಸಿದ ಮಹಾರಾಷ್ಟ್ರ: ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯವಲ್ಲ
ವ್ಯಾಪಕ ಆಕ್ರೋಶದ ಬಳಿಕ ಹಿಂದಿ ಭಾಷೆ ಕಡ್ಡಾಯ ಆದೇಶ ಪರಿಷ್ಕರಿಸಿದ ಸರಕಾರ

ಸಾಂದರ್ಭಿಕ ಚಿತ್ರ (credit: news18)
ಹೊಸದಿಲ್ಲಿ: ಮಹಾರಾಷ್ಟ್ರದಾದ್ಯಂತ ಇರುವ ಶಾಲೆಗಳಲ್ಲಿ ಹಿಂದಿ ಕಲಿಕೆ ಐಚ್ಛಿಕ ಎಂದು ಮಂಗಳವಾರ ತನ್ನ ಮೂರನೆಯ ಅಧಿಸೂಚನೆಯನ್ನು ಪರಿಷ್ಕರಿಸಿ, ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ, ಎಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ಇರುವ ಎಲ್ಲ ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೆಯ ಭಾಷೆಯನ್ನಾಗಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಈ ಅಧಿಸೂಚನೆಯನ್ನು ವಿರೋಧಿಸಿ, ವಿರೋಧ ಪಕ್ಷವಾದ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಹಾಗೂ ಆಡಳಿತಾರೂಢ ಬಿಜೆಪಿ ಪಕ್ಷದ ಮಿತ್ರ ಎಂದೇ ಹೇಳಲಾಗಿರುವ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಿದ್ದವು.
ಈ ಪ್ರತಿಭಟನೆಗಳ ತೀವ್ರತೆಯಿಂದಾಗಿ, ಹಿಂದಿ ಭಾಷಿಕೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು. ಇದಾದ ಐದು ದಿನಗಳ ನಂತರ, ಮಹಾರಾಷ್ಟ್ರ ಸರಕಾರ ತನ್ನ ಆದೇಶವನ್ನು ಹಿಂಪಡೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ, ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಿಗೇ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮರಾಠಿ ಮಾತ್ರ ಕಡ್ಡಾಯ ಕಲಿಕಾ ಭಾಷೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡಾ ಘೋಷಿಸಿದ್ದರು.
ಆದರೆ, ನಿನ್ನೆ ಈ ಅಧಿಸೂಚನೆಯನ್ನು ಪರಿಷ್ಕರಿಸಿರುವ ಶಾಲಾ ಶಿಕ್ಷಣ ಇಲಾಖೆ, ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯವಲ್ಲ. ಆದರೆ, ಒಂದರಿಂದ ಐದನೆಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೂರನೆಯ ಭಾಷೆಯನ್ನಾಗಿ ಔಪಚಾರಿಕವಾಗಿ ಬೋಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ಕ್ರಮವನ್ನೂ ವಿರೋಧಿಸುತ್ತಿರುವ ಮರಾಠಿ ಸಂಘಟನೆಗಳು, ಈ ಕ್ರಮವು ರಾಜ್ಯದಲ್ಲಿ ಹಿಂದಿಯನ್ನು ಹಿಂಬಾಗಿಲ ಮೂಲಕ ಪರಿಚಯಿಸುವ ಪ್ರಯತ್ನವಾಗಿದೆ ಎಂದು ಆರೋಪಿಸುತ್ತಿವೆ. ಹೀಗಿದ್ದೂ, ವಿದ್ಯಾರ್ಥಿಗಳು ಬಯಸಿದರೆ, ಮೂರನೆಯ ಭಾಷೆಯನ್ನಾಗಿ ಬೇರೆ ಭಾಷೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.







