ಮಹಾರಾಷ್ಟ್ರ | ಚಲಿಸುತ್ತಿರುವ ಬಸ್ ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಕೆಳಕ್ಕೆ ಎಸೆದ ಮಹಿಳೆ!

ಮುಂಬೈ: ಮಹಾರಾಷ್ಟ್ರದ ಪರ್ಭಾನಿಯಲ್ಲಿ ಚಲಿಸುತ್ತಿದ್ದ ಸ್ಲೀಪರ್ ಕೋಚ್ ಬಸ್ ನಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿದ 19 ವರ್ಷದ ಮಹಿಳೆಯೋರ್ವರು, ನಂತರ, ಆ ಶಿಶುವನ್ನು ಕೆಳಕ್ಕೆ ಎಸೆದು, ಅದನ್ನು ನನ್ನ ಪತಿ ಎಸೆದನು ಎಂದು ಆರೋಪಿಸಿರುವ ಘಟನೆ ವರದಿಯಾಗಿದೆ. ನವಜಾತ ಶಿಶುವನ್ನು ಕೆಳಕ್ಕೆ ಎಸೆದಿದ್ದರಿಂದ, ಆ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಮಂಗಳವಾರ ಮುಂಜಾನೆ ಪತ್ರಿ-ಸೇಲು ರಸ್ತೆಯಲ್ಲಿ ಸುಮಾರು 6.30ರ ವೇಳೆಗೆ ಬೆಳಕಿಗೆ ಬಂದಿದ್ದು, ಬಟ್ಟೆಯೊಂದರಲ್ಲಿ ಏನನ್ನೋ ಸುತ್ತಿ ಎಸೆದಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು ಈ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವಜಾತ ಶಿಶುವನ್ನು ಬಸ್ ನಿಂದ ಕೆಳಕ್ಕೆ ಎಸೆದ ಮಹಿಳೆಯನ್ನು ರಿತಿಕಾ ಧೇರೆ ಎಂದು ಗುರುತಿಸಲಾಗಿದ್ದು, ಆಕೆ ಸಂತ್ ಪ್ರಯಾಗ್ ಟ್ರಾವೆಲ್ಸ್ ನ ಸ್ಲೀಪರ್ ಕೋಚ್ ಬಸ್ ನಲ್ಲಿ ತನ್ನ ಪತಿ ಎಂದು ಹೇಳಲಾಗಿರುವ ಅಲ್ತಾಫ್ ಶೇಖ್ ನೊಂದಿಗೆ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದಳು ಎಂದು ಹೇಳಲಾಗಿದೆ.
“ಪ್ರಯಾಣದ ವೇಳೆ ಗರ್ಭಿಣಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನವಜಾತ ಗಂಡು ಶಿಶುವಿಗೆ ಜನ್ಮ ನೀಡಿದ್ದಾಳೆ.ಆದರೆ, ದಂಪತಿಗಳು ಆ ಮಗುವನ್ನು ಬಟ್ಟೆಯ ತುಂಡೊಂದರಲ್ಲಿ ಸುತ್ತಿ, ಅದನ್ನು ಬಸ್ ನಿಂದ ಹೊರಕ್ಕೆಸೆದಿದ್ದಾರೆ” ಎಂದು ಅವರು ಹೇಳಿದ್ದಾರೆ.
ಮೇಲಂತಸ್ತು ಹಾಗೂ ಕೆಳ ಅಂತಸ್ತು ಕಂಪಾರ್ಟ್ ಮೆಂಟ್ ಗಳನ್ನು ಹೊಂದಿದ್ದ ಸ್ಲೀಪರ್ ಬಸ್ ನ ಚಾಲಕ, ಬಸ್ ನಿಂದ ಏನನ್ನೋ ಹೊರಗೆಸೆದದ್ದನ್ನು ಗಮನಿಸಿದ್ದಾರೆ. ಈ ಕುರಿತು ಅವರು ಅಲ್ತಾಫ್ ಶೇಖ್ ನನ್ನು ವಿಚಾರಿಸಿದಾಗ, ನನ್ನ ಪತ್ನಿಗೆ ಬಸ್ ಪ್ರಯಾಣದಿಂದ ವಾಕರಿಕೆ ಬಂದಿದ್ದರಿಂದ, ಆಕೆ ವಾಂತಿ ಮಾಡಿಕೊಂಡಿದ್ದಾಳೆ ಎಂದು ಆತ ಸುಳ್ಳು ಮಾಹಿತಿ ನೀಡಿದ್ದಾನೆ.
“ಈ ನಡುವೆ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದಾರಿಹೋಕರೊಬ್ಬರು ಬಸ್ ನ ಕಿಟಕಿಯಿಂದ ಸಂಶಯಾಸ್ಪದ ವಸ್ತು ಎಸೆದಿದ್ದನ್ನು ಗಮನಿಸಿದ್ದು, ಅದರಲ್ಲಿ ನವಜಾತ ಶಿಶುವಿನ ಮೃತ ದೇಹವಿರುವುದನ್ನು ಕಂಡು ಆಘಾತಕ್ಕೀಡಾಗಿದ್ದಾರೆ. ಕೂಡಲೇ ಅವರು 112 ಸಂಖ್ಯೆಗೆ ಕರೆ ಮಾಡಿ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯ ಸಂಬಂಧ, ಆರೋಪಿ ದಂಪತಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.







