ಮಹಾರಾಷ್ಟ್ರ | ರಾಷ್ಟ್ರೀಯ ಹೆದ್ದಾರಿ 48ರ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಆ್ಯಂಬ್ಯುಲೆನ್ಸ್; ಮಹಿಳೆ ಮೃತ್ಯು

ಮುಂಬೈ: ಮುಂಬೈನ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಭಾರಿ ಪ್ರಮಾಣದ ಸಂಚಾರ ದಟ್ಟಣೆಯುಂಟಾಗಿದ್ದರಿಂದ, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ಸಾಗಿಸುವಾಗ ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಛಾಯಾ ಪೂರವ್ ಎಂದು ಗುರುತಿಸಲಾಗಿದ್ದು, ಆಕೆಯ ಸಾವಿನಿಂದ ಪಾಲ್ಘರ್ ನಲ್ಲಿನ ಆರೋಗ್ಯ ಸೌಲಭ್ಯಗಳ ಕೊರತೆ ಹಾಗೂ ಈ ಜಿಲ್ಲೆಯನ್ನು ಗರಿಷ್ಠ ಪ್ರಮಾಣದ ನಗರಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಭಾರಿ ಸಂಚಾರ ದಟ್ಟಣೆಯ ಭಯಾನಕತೆಗಳೆರಡೂ ಏಕಕಾಲಕ್ಕೆ ಬಯಲಾಗಿದೆ.
ಜುಲೈ 31ರಂದು ಪಾಲ್ಘರ್ ಜಿಲ್ಲೆಯ ಮಧುಕರ್ ನಗರದಲ್ಲಿರುವ ತಮ್ಮ ನಿವಾಸದ ಬಳಿ ಮರದ ಕೊಂಬೆಯೊಂದು ಉರುಳಿ ಬಿದ್ದಿದ್ದರಿಂದ ಛಾಯಾ ಪೂರವ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಆಕೆಯ ಪಕ್ಕೆಲುಬು, ತೋಳುಗಳು ಹಾಗೂ ತಲೆಗೆ ಗಾಯಗಳಾಗಿದ್ದವು.
ಆದರೆ, ಪಾಲ್ಘರ್‌ನಲ್ಲಿ ಅಪಘಾತದ ಚಿಕಿತ್ಸಾ ಕೇಂದ್ರವಿಲ್ಲದೆ ಇರುವುದರಿಂದ, ಸ್ಥಳೀಯ ಆಸ್ಪತ್ರೆಯೊಂದು ಆಕೆಯನ್ನು ಮುಂಬೈನಲ್ಲಿನ ಹಿಂದುಜಾ ಆಸ್ಪತ್ರೆಗೆ ಶಿಫಾರಸು ಮಾಡಿತ್ತು. ಪಾಲ್ಘರ್ ಜಿಲ್ಲೆಯಿಂದ ಮುಂಬೈಗೆ 100 ಕಿಮೀ ದೂರವಿದ್ದು, ಪ್ರಯಾಣದ ಅವಧಿ ಸಾಮಾನ್ಯವಾಗಿ ಸುಮಾರು ಎರಡೂವರೆ ಗಂಟೆ ತಗಲುತ್ತದೆ. ಅದರಂತೆ, ಛಾಯಾ ಪೂರವ್‌ಗೆ ಅರವಳಿಕೆ ಚುಚ್ಚುಮದ್ದು ನೀಡಿದ ನಂತರ, ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಮುಂಬೈಗೆ ರವಾನಿಸಲಾಗಿತ್ತು. ಆ ಆ್ಯಂಬುಲೆನ್ಸ್‌ನಲ್ಲಿ ಛಾಯಾ ಪೂರವ್ ಅವರ ಪತಿ ಆಕೆಯ ಪಕ್ಕದಲ್ಲೇ ಕುಳಿತಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ 48ರ ಭಾರಿ ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಸಿಲುಕಿಕೊಂಡಿತು ಎನ್ನಲಾಗಿದೆ.
ಸಂಜೆ ಸುಮಾರು ಆರು ಗಂಟೆಯ ವೇಳೆಗೆ ಆಕೆಯನ್ನು ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕೇವಲ ಅರ್ಧ ದಾರಿಯನ್ನು ಮಾತ್ರ ಕ್ರಮಿಸಿತ್ತು. ಇದರಿಂದಾಗಿ ಅರವಳಿಕೆ ಚುಚ್ಚು ಮದ್ದಿನ ಪ್ರಭಾವ ಕ್ಷೀಣಿಸತೊಡಗಿತ್ತು. ಇದರಿಂದಾಗಿ ಛಾಯಾ ಪೂರವ್ ಗೆ ನೋವು ಹೆಚ್ಚಾಗತೊಡಗಿತು. ಆಕೆಯ ಆರೋಗ್ಯ ಸ್ಥಿತಿ ವಿಷಮಿಸತೊಡಗಿದ್ದರಿಂದ, ಹಿಂದುಜಾ ಆಸ್ಪತ್ರೆಗಿಂತ ಸುಮಾರು 30 ಕಿಮೀ ದೂರವಿದ್ದ ಮೀರಾ ರಸ್ತೆಯಲ್ಲಿನ ಆರ್ಬಿಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸಂಜೆ ಏಳು ಗಂಟೆಗೆ ಆಕೆಗೆ ಚಿಕಿತ್ಸೆ ನೀಡಲಾಯಿತಾದರೂ, ಅದು ತೀರಾ ತಡವಾಗಿತ್ತು. ಛಾಯಾ ಪೂರವ್ ರನ್ನು ಪರೀಕ್ಷಿಸಿದ ವೈದ್ಯರು, ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಒಂದು ವೇಳೆ ಇನ್ನು ಮೂವತ್ತು ನಿಮಿಷಗಳಷ್ಟು ಮುಂಚಿತವಾಗಿ ಆಕೆಯನ್ನು ಆಸ್ಪತ್ರೆಗೆ ಕರೆ ತಂದಿದ್ದರೆ, ಆಕೆಯನ್ನು ರಕ್ಷಿಸಬಹುದಿತ್ತು ಎಂದು ಆಕೆಯ ಪತಿ ಕೌಶಿಕ್‌ಗೆ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೌಶಿಕ್, "ಆಕೆ ಸಹಿಸಲಸಾಧ್ಯವಾದ ನೋವಿನಿಂದ ನರಳುತ್ತಿದ್ದದ್ದನ್ನು ನಾನು ಕಂಡೆ" ಎಂದು ಅಳಲು ತೋಡಿಕೊಂಡಿದ್ದಾರೆ.







