ಗುಜರಾತ್ನ ರಾಜಕೀಯದಲ್ಲಿ ಮಹತ್ತರ ಬದಲಾವಣೆ: ಸಂಪುಟ ವಿಸ್ತರಣೆಗೆ ಮುನ್ನ ಎಲ್ಲ ಸಚಿವರ ರಾಜೀನಾಮೆ

ಭೂಪೇಂದ್ರ ಪಟೇಲ್ | Photo Credit : PTI
ಗಾಂಧಿನಗರ: ಗುಜರಾತ್ ರಾಜಕೀಯದಲ್ಲಿ ಭಾರೀ ಬದಲಾವಣೆ ಸಂಭವಿಸಿದ್ದು, ಶುಕ್ರವಾರ ನಡೆಯಲಿರುವ ಸಂಪುಟ ವಿಸ್ತರಣೆಯ ಮುನ್ನ ರಾಜ್ಯ ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಾತ್ರ ಅಧಿಕಾರದಲ್ಲೇ ಮುಂದುವರಿಯಲಿದ್ದು, ಅವರು ಪ್ರಸ್ತುತ ಸಂಪುಟದ ಏಕೈಕ ಸದಸ್ಯರಾಗಿದ್ದಾರೆ.
ಮೂಲಗಳ ಪ್ರಕಾರ, ಈಗ ಸಚಿವ ಸಂಪುಟದಲ್ಲಿ 16 ಸದಸ್ಯರಿದ್ದರು. ಅದನ್ನು 26 ಸದಸ್ಯರ ತನಕ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಹೊಸ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವು ಶುಕ್ರವಾರ ಬೆಳಿಗ್ಗೆ 11.30ಕ್ಕೆ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿರಲಿದ್ದಾರೆ.
ಮುಖ್ಯಮಂತ್ರಿ ಪಟೇಲ್ ಅವರು ಇಂದು ರಾತ್ರಿ ನಂತರ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ. ಸುಮಾರು ಏಳು ರಿಂದ ಹತ್ತು ಮಂದಿ ಹಾಲಿ ಸಚಿವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಉಳಿದ ಹುದ್ದೆಗಳಿಗೆ ಹೊಸ ಮುಖಗಳು ಸೇರ್ಪಡೆಯಾಗಲಿವೆ.
ಗುರುವಾರ ಸಂಜೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಮಹತ್ವದ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸುನಿಲ್ ಬನ್ಸಾಲ್ ಮತ್ತು ಮುಖ್ಯಮಂತ್ರಿ ಪಟೇಲ್ ಉಪಸ್ಥಿತರಿದ್ದರು. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬನ್ಸಾಲ್ ಮತ್ತು ಪಟೇಲ್ ಅವರು ಪ್ರತಿಯೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ, ಕೇಂದ್ರ ನಾಯಕತ್ವದ ತೀರ್ಮಾನವನ್ನು ತಿಳಿಸಿ ಅವರ ರಾಜೀನಾಮೆಗಳನ್ನು ಸಂಗ್ರಹಿಸಿದರು.
ಪಕ್ಷದ ಹಿರಿಯ ನಾಯಕರ ಪ್ರಕಾರ, ಮುಂದಿನ ರಾಜಕೀಯ ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ತಯಾರಾಗಲು ಮತ್ತು ಮುಂಬರುವ ಚುನಾವಣೆಗೆ ಮುನ್ನ ಸರ್ಕಾರದಲ್ಲಿ ಹೊಸ ಶಕ್ತಿಯನ್ನು ತುಂಬುವ ಉದ್ದೇಶದಿಂದ ಈ ಸಂಪುಟ ಪುನರ್ರಚನೆ ಕೈಗೊಳ್ಳಲಾಗಿದೆ.
ಗುಜರಾತ್ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಅವರು ಈ ಸಂಪೂರ್ಣ ಪ್ರಕ್ರಿಯೆಯನ್ನು ಸಂಯೋಜಿಸಿದ್ದು, ಕೇಂದ್ರ ನಾಯಕತ್ವದ ನಿರ್ದೇಶನವನ್ನು ಸಚಿವರಿಗೆ ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.







