2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ: ವೋಟ್ ಫಾರ್ ಡೆಮಾಕ್ರಸಿ ವರದಿ

ಸಾಂದರ್ಭಿಕ ಚಿತ್ರ | PC : ANI
ಹೊಸದಿಲ್ಲಿ: ಪ್ರತಿಷ್ಠಿತ ತಜ್ಞರ ನೇತೃತ್ವದ ಸಾಮಾಜಿಕ ಕ್ರಿಯಾ ಗುಂಪು ವೋಟ್ ಫಾರ್ ಡೆಮಾಕ್ರಸಿ(ವಿಎಫ್ಡಿ) ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳ ಕ್ಷೇತ್ರಮಟ್ಟದ ವಿಶ್ಲೇಷಣೆಯನ್ನು ಬಿಡುಗಡೆಗೊಳಿಸಿದ್ದು,ನವಂಬರ್ 2024ರಲ್ಲಿ ನಡೆದಿದ್ದ ಚುನಾವಣೆಗಳಲ್ಲಿ ಗಂಭೀರ ಅಕ್ರಮಗಳನ್ನು ಇದು ಎತ್ತಿ ತೋರಿಸಿದೆ ಎಂದು thehindu.com ವರದಿ ಮಾಡಿದೆ.
‘ನಿಷ್ಕ್ರಿಯ ಇಸಿಐ ಮತ್ತು ಭಾರತದ ಚುನಾವಣಾ ವ್ಯವಸ್ಥೆಯ ಶಸ್ತ್ರೀಕರಣ’ ಶೀರ್ಷಿಕೆಯ ವರದಿಯು ಭಾರತೀಯ ಚುನಾವಣಾ ಆಯೋಗ(ಇಸಿಐ) ಮತ್ತು ಮುಖ್ಯ ಚುನಾವಣಾಧಿಕಾರಿ(ಸಿಇಒ) ಅವರ ಅಧಿಕೃತ ದತ್ತಾಂಶಗಳನ್ನು ಹಾಗೂ ಚುನಾವಣಾ ಸಿಬ್ಬಂದಿಗಳು ಮತ್ತು ಮತದಾರರ ಹೇಳಿಕೆಗಳನ್ನು ಆಧರಿಸಿದ್ದು,ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚುನಾವಣಾ ತಜ್ಞರಾದ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಿಟಿಜನ್ಸ್ ಕಮಿಷನ್ ಆನ್ ಇಲೆಕ್ಷನ್ಸ್ನ ಸಂಯೋಜಕ ಎಂ.ಜಿ.ದೇವಸಹಾಯಂ, ಪಂಜಾಬ್ ವಿವಿಯ ಮಾಜಿ ಡೀನ್ ಪ್ರೊ.ಪ್ಯಾರೇಲಾಲ್ ಗರ್ಗ್, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ವಾಸ್ತುಶಿಲ್ಪ ತಜ್ಞ ಮಾಧವ ದೇಶಪಾಂಡೆ ಹಾಗೂ ಐಐಟಿ ಕಾನ್ಪುರದ ಮಾಜಿ ಪ್ರೊಫೆಸರ್ ಹರೀಶ ಕಾರ್ಣಿಕ್ ಅವರ ಮಾರ್ಗದರ್ಶನವನ್ನು ವಿಎಫ್ಡಿ ಹೊಂದಿದೆ.
ಶನಿವಾರ ಬಿಡುಗಡೆಗೊಂಡ ವಿಎಫ್ಡಿ ವರದಿಯು, ಭಾರತದ ಚುನಾವಣಾ ವ್ಯವಸ್ಥೆಯ ಶಸ್ತ್ರೀಕರಣವು ವಿದ್ಯುನ್ಮಾನ ಮತದಾನ ಪ್ರಕ್ರಿಯೆಯ ನಾಲ್ಕು ಘಟಕಗಳ ದುರ್ಬಲತೆಗಳಲ್ಲಿ ಕಂಡು ಬಂದಿದೆ ಎಂದು ಹೇಳಿದೆ. ಮತಗಳನ್ನು ದಾಖಲಿಸುವ ಮೈಕ್ರೋಚಿಪ್ಗಳು,ವಿವಿಪ್ಯಾಟ್ಗಳು, ಚಿಹ್ನೆ ಲೋಡಿಂಗ್ ವ್ಯವಸ್ಥೆಗಳು(ಎಲ್ಎಲ್ಯು) ಮತ್ತು ಮತದಾರರ ಪಟ್ಟಿಗಳು ಈ ನಾಲ್ಕು ಘಟಕಗಳಾಗಿವೆ.
ವಿಎಫ್ಡಿ ಪ್ರಕಾರ ವ್ಯವಸ್ಥೆಯು 2017ರಿಂದ ಸ್ವತಂತ್ರವಾಗಿ ಕಾರ್ಯಾಚರಿಸುವುದನ್ನು ನಿಲ್ಲಿಸಿದ್ದು, ಈಗ ಅಂತರ್ಜಾಲದೊಂದಿಗೆ ಸಂಪರ್ಕವನ್ನು ಹೊಂದಿದೆ ಮತ್ತು ಇದು ತಿರುಚುವಿಕೆಯನ್ನು ಸಾಧ್ಯವಾಗಿಸುತ್ತದೆ. ಮತದಾರರ ಪಟ್ಟಿಗಳನ್ನು ನಿರ್ವಹಿಸುವ ಚುನಾವಣಾ ಆಯೋಗದ ಕಾರ್ಯವಿಧಾನಗಳು ಭಾರೀ ಪ್ರಮಾಣದಲ್ಲಿ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಕಾರಣವಾಗಿದ್ದು, ಚುನಾವಣಾ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ವಿಎಫ್ಡಿ ಆರೋಪಿಸಿದೆ.
2024ರ ಚುನಾವಣೆಗಳಲ್ಲಿ ತಡರಾತ್ರಿ ಮತದಾನ ಪ್ರಮಾಣದಲ್ಲಿ ಹಠಾತ್ ಏರಿಕೆ ಕಂಡು ಬಂದಿತ್ತು. ಸಂಜೆ ಐದು ಗಂಟೆಗೆ ಶೇ.58.22ರಷ್ಟಿದ್ದ ಮತದಾನ ಪ್ರಮಾಣವು ಮಧ್ಯರಾತ್ರಿಯ ವೇಳೆಗೆ ಶೇ.66.05ಕ್ಕೆ ಜಿಗಿದಿತ್ತು, ಅಂದರೆ ಶೇ.7.83ರಷ್ಟು (ಸುಮಾರು 48 ಲಕ್ಷ ಹೆಚ್ಚುವರಿ ಮತಗಳು)ಏರಿಕೆಯಾಗಿತ್ತು ಎನ್ನುವುದನ್ನು ವಿಎಫ್ಡಿ ಬೆಟ್ಟುಮಾಡಿದೆ. ಐತಿಹಾಸಿಕವಾಗಿ ಗಮನಾರ್ಹ ಪ್ರಮಾಣದಲ್ಲಿ ನಂತರದ ಏರಿಕೆ ಕಡಿಮೆಯಿದ್ದರೂ ನಾಂದೇಡ್, ಜಳಗಾಂವ್, ಹಿಂಗೋಲಿ, ಸೊಲ್ಲಾಪುರ, ಬೀಡ್ ಮತ್ತು ಧುಳೆಗಳಲ್ಲಿ ಎರಡಂಕಿಯಷ್ಟು ಅತ್ಯಂತ ತೀವ್ರ ಏರಿಕೆ ದಾಖಲಾಗಿತ್ತು ಎಂದು ಹೇಳಿರುವ ವರದಿಯು, ಹಲವಾರು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಅತ್ಯಂತ ಕಡಿಮೆಯಿತ್ತು. 25 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 3,000 ಮತಗಳಿಗೂ ಕಡಿಮೆ ಮತ್ತು 69 ಕ್ಷೇತ್ರಗಳಲ್ಲಿ 10,000 ಮತಗಳಿಗೂ ಕಡಿಮೆಯಿತ್ತು,ಇದು ಸಣ್ಣ ಪ್ರಮಾಣದ ವೈಪರೀತ್ಯವೂ ಚುನಾವಣಾ ಫಲಿತಾಂಶಗಳನ್ನು ಬದಲಿಸಲು ಸಾಧ್ಯ ಎನ್ನುವುದನ್ನು ಸೂಚಿಸುತ್ತಿದೆ ಎಂದು ಒತ್ತಿ ಹೇಳಿದೆ.
ಮೇ 2024ರ ಲೋಕಸಭಾ ಚುನಾವಣೆ ಮತ್ತು ನವಂಬರ್ 2024ರ ವಿಧಾನಸಭಾ ಚುನಾವಣೆಗಳ ನಡುವೆ ಅನಿಯಮಿತ ಬದಲಾವಣೆಗಳಾಗಿದ್ದನ್ನೂ ವರದಿಯು ಎತ್ತಿ ತೋರಿಸಿದೆ. ಕೇವಲ ಆರು ತಿಂಗಳುಗಳಲ್ಲಿ,ಮುಖ್ಯವಾಗಿ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು ಸೋತಿದ್ದ 85 ವಿಧಾನಸಭಾ ಕ್ಷೇತ್ರಗಳ 12,000 ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಗಳಲ್ಲಿ 46 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಸೇರ್ಪಡೆಗೊಂಡಿದ್ದವು. ಕೆಲವು ಮತಗಟ್ಟೆಗಳಲ್ಲಿ ಸಂಜೆ ಐದು ಗಂಟೆಯ ಬಳಿಕ 600ಕ್ಕೂ ಅಧಿಕ ಮತದಾರರನ್ನು ಸೇರಿಸಿದ್ದು ವರದಿಯಾಗಿದ್ದು,ಇಷ್ಟು ಮತಗಳ ಚಲಾವಣೆಗೆ ಹೆಚ್ಚುವರಿ 10 ಗಂಟೆಗಳು ಅಗತ್ಯವಾಗುತ್ತವೆ ಮತ್ತು ವಾಸ್ತವದಲ್ಲಿ ಅದು ಸಂಭವಿಸಿರಲಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.
ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಸಮಂಜಸತೆಗಳನ್ನು ಎತ್ತಿ ತೋರಿಸಿರುವ ವಿಎಫ್ಡಿ, ಚುನಾವಣಾ ವ್ಯವಸ್ಥೆಯ ವಿಕೇಂದ್ರೀಕರಣಕ್ಕೆ ಆಗ್ರಹಿಸಿದೆ.







