Kerala | ಪರಿಶಿಷ್ಟ ಜಾತಿಯ ಮಹಿಳೆಯನ್ನು ಮಲಪ್ಪುರಂ ZP ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ ಮುಸ್ಲಿಂ ಲೀಗ್

Photo Credit : thehindu.com
ಮಲಪ್ಪುರಂ: ಮಲಪ್ಪುರಂ ಜಿಲ್ಲಾ ಪಂಚಾಯತಿಗೆ ಪರಿಶಿಷ್ಟ ಜಾತಿಯ ಮಹಿಳೆಯನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜಕೀಯ ಅಚ್ಚರಿಗೆ ಕಾರಣವಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಎ.ಪಿ.ಸ್ಮಿಜಿ ಮಲಪ್ಪುರಂ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಅವರು ಮಲಪ್ಪುರಂ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಎ.ಪಿ. ಉನ್ನಿಕೃಷ್ಣನ್ ಅವರ ಪುತ್ರಿಯಾಗಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ಸ್ಮಿಜಿ ಅವರ ಹೆಸರನ್ನು ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ರಾಜ್ಯಾಧ್ಯಕ್ಷ ಸೈಯದ್ ಸಾದಿಕಾಲಿ ಶಿಹಾಬ್ ತಂಙಳ್ ಪ್ರಕಟಿಸಿದರು. ಮಲಪ್ಪುರಂ ಜಿಲ್ಲಾ ಪಂಚಾಯತಿಯ ತನಲೂರ್ ವಿಭಾಗದಿಂದ ಸ್ಮಿಜಿ ಅವರು 6,852 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.
ಮತ್ತೊಂದೆಡೆ ಎಲ್ಲ 35 ವಿಭಾಗಗಳಲ್ಲಿ ಗೆಲುವು ಸಾಧಿಸುವ ಮೂಲಕ, ಅವಿರೋಧವಾಗಿ ಮಲಪ್ಪುರಂ ಜಿಲ್ಲಾ ಪಂಚಾಯತಿಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಡಿಎಫ್ ವತಿಯಿಂದ ಪಿ.ಎ.ಜಬ್ಬಾರ್ ಹಾಜಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.





