ಭಾರತೀಯ ಸೇನಾ ಮುಖ್ಯಸ್ಥರಿಂದ ಪ್ರಶಂಸಾಪತ್ರ ಸ್ವೀಕರಿಸಿದ ಖ್ಯಾತ ಮಲಯಾಳಂ ನಟ ಮೋಹನ್ಲಾಲ್

ಮಲಯಾಳಂ ನಟ ಮೋಹನ್ಲಾಲ್ | Photo Credit : PTI
ಹೊಸದಿಲ್ಲಿ,ಅ.7: ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಇಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ಲಾಲ್ ಅವರಿಗೆ ಪ್ರಶಂಸಾಪತ್ರವನ್ನು ಪ್ರದಾನಿಸಿದರು.
ದ್ವಿವೇದಿ ಜೊತೆಗಿನ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಮೋಹನ್ಲಾಲ್,‘ಇಂದು ಜ.ತ್ರಿವೇದಿಯವರಿಂದ ಸೇನೆಯ ಮುಖ್ಯ ಕಚೇರಿಗೆ ಆಹ್ವಾನದ ಗೌರವ ನನಗೆ ಲಭಿಸಿತ್ತು. ಅಲ್ಲಿ ಏಳು ಸೇನಾ ಕಮಾಂಡರ್ಗಳ ಉಪಸ್ಥಿತಿಯಲ್ಲಿ ಪ್ರಶಂಸಾಪತ್ರವನ್ನು ನನಗೆ ಪ್ರದಾನಿಸಲಾಗಿದೆ ’ ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನಂಟ್ ಕರ್ನಲ್ ಆಗಿರುವ ಮೋಹನ್ಲಾಲ್(65),ಸೇನಾ ಮುಖ್ಯಸ್ಥರಿಂದ ಪ್ರಶಂಸೆಯನ್ನು ಸ್ವೀಕರಿಸಿದ್ದು ತನ್ನ ಪಾಲಿಗೆ ಗೌರವವಾಗಿದೆ. ಗೌರವ ಲೆಫ್ಟಿನಂಟ್ ಆಗಿ ಈ ಮನ್ನಣೆಯನ್ನು ಸ್ವೀಕರಿಸಿದ ಘಳಿಗೆಯು ಅತೀವ ಹೆಮ್ಮೆಯದಾಗಿತ್ತು. ಈ ಗೌರವ ಮತ್ತು ಅಚಲ ಬೆಂಬಲಕ್ಕಾಗಿ ಜ.ದ್ವಿವೇದಿ, ಇಡೀ ಭಾರತಿಯ ಸೇನೆ ಮತ್ತು ತನ್ನ ಮಾತೃ ಘಟಕ ಪ್ರಾದೇಶಿಕ ಸೇನೆಗೆ ತಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ಲಾಲ್, ಭಾರತಿಯ ಸೇನೆಗಾಗಿ ಮತ್ತು ನಾಗರಿಕರ ಶ್ರೇಯೋಭಿವೃದ್ಧಿಗಾಗಿ ತಾನು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದರು.
ನಿರ್ದೇಶಕ ಮೇಜರ್ ರವಿ ಅವರೊಂದಿಗೆ ಸೇನೆಯ ಕುರಿತು ಇನ್ನಷ್ಟು ಚಿತ್ರಗಳನ್ನು ಮಾಡಲು ತಾನು ಎದುರು ನೋಡುತ್ತಿದ್ದೇನೆ ಎಂದೂ ಅವರು ತಿಳಿಸಿದರು.
ಮೋಹನ್ಲಾಲ್ ಇತ್ತೀಚಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು.





