ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪ | ತೊಂದರೆ ಲೆಕ್ಕಿಸದೆ SIT ಮುಂದೆ ಹೇಳಿಕೆ ನೀಡಿದ ಸಂತ್ರಸ್ತೆಯರ ದಿಟ್ಟತನಕ್ಕೆ ಸುಪ್ರೀಂಕೋರ್ಟ್ ಶ್ಲಾಘನೆ

ಸುಪ್ರೀಂಕೋರ್ಟ್ | PTI
ತಿರುವನಂತಪುರ : ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಭಾರೀ ಬೆಲೆ ತೆರಬೇಕಾದ ಅಪಾಯವಿದ್ದರೂ, ಅದನ್ನು ಲೆಕ್ಕಿಸದೆ ಕೇರಳದ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿದೆಯೆನ್ನಲಾದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ ಮಹಿಳೆಯರ ದಿಟ್ಟತನವನ್ನು ಸುಪ್ರೀಂಕೋರ್ಟ್ ಮಂಗಳವಾರ ಶ್ಲಾಘಿಸಿದೆ.
ಆದರೆ, ಲೈಂಗಿಕ ಕಿರುಕುಳದ ಬಗ್ಗೆ ಮೌನವಹಿಸಲು ಬಯಸಿರುವ ಮಹಿಳೆಯರ ಭಾವನೆಗಳನ್ನು ಕೂಡಾ ತನಿಖಾ ಸಂಸ್ಥೆಗಳು ಗೌರವಿಸಬೇಕೆಂದು ಅದು ಹೇಳಿದೆ.
ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳ ತನಿಖೆ ನಡೆಸಿದ ನ್ಯಾಯಮೂರ್ತಿ ಹೇಮಾ ಸಮಿತಿಯ ಮುಂದೆ ವಿಷಯ ಬಹಿರಂಗಪಡಿಸಿದ ಮತ್ತು ಆನಂತರ ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ತಂಡದ ಮುಂದೆ ಹೇಳಿಕೆಗಳನ್ನು ನೀಡಿದ ಸಂತ್ರಸ್ತೆಯರು ಹಾಗೂ ಸಾಕ್ಷಿಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್, ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಪ್ರಶಂಸಿಸಿತು. ಇದರಿಂದಾಗಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 25ಕ್ಕೂ ಅಧಿಕ ಎಫ್ಐಆರ್ಗಳನ್ನು ದಾಖಲಿಸಲಾಯಿತೆಂದು ಅವರು ಹೇಳಿದರು.
ಎಲ್ಲಾ ರೀತಿಯ ಅಡೆತಡೆಗಳನ್ನು ಮೀರಿ, ಈ ಮಹಿಳೆಯರು ಮುಂದೆ ಬಂದು ಸಾಕ್ಷ್ಯ ನುಡಿದಿದ್ದಾರೆಂದು ನ್ಯಾಯಮೂರ್ತಿ ಮೆಹ್ತಾ ತಿಳಿಸಿದರು.
ಆದರೆ ಹೇಮಾ ಸಮಿತಿಯ ಮುಂದೆ ಹೇಳಿಕೆಗಳನ್ನು ನೀಡಿದ ಬಳಿಕ ವಿಷಯವನ್ನು ಮುಂದುವರಿಸಲು ಬಯಸದ ಅಥವಾ ಲೈಂಗಿಕ ಕಿರುಕುಳವನ್ನೆಸಗಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಕಾನೂನು ಕಲಾಪಗಳನ್ನು ನಡೆಸಲು ಬಯಸದ ಮಹಿಳೆಯರ ಪ್ರಕರಣಗಳಲ್ಲಿ SIT ಏಕಪಕ್ಷೀಯವಾಗಿ ಎಫ್ಐಆರ್ ದಾಖಲಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟೀಕರಣ ನೀಡಿತು.





