ಅತ್ಯಾಚಾರ ಪ್ರಕರಣ |ರ್ಯಾಪರ್ ವೇಡನ್ ಪರಾರಿಯಾಗಿಲ್ಲ: ಮಾಹಿತಿ ನೀಡಿದ ಕೇರಳ ಪೊಲೀಸ್

Photo : thehindu
ಕೊಚ್ಚಿ, ಆ. 7: ರಾಜ್ಯದ ವಿವಿಧ ಸ್ಥಳಗಳಲ್ಲಿ 2021-2023ರ ನಡುವೆ ಹಲವು ಬಾರಿ ವೈದ್ಯೆಯೋರ್ವರ ಅತ್ಯಾಚಾರ ಎಸಗಿದ ಆರೋಪಕ್ಕೆ ಒಳಗಾಗಿರುವ ಮಲೆಯಾಳಂನ ಜನಪ್ರಿಯ ರ್ಯಾಪರ್ ಹಿರಣ್ದಾಸ್ ಮುರಳಿ ಆಲಿಯಾಸ್ ವೇಡನ್ ಇರುವ ಸ್ಥಳದ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ, ವೇಡನ್ ಇರುವ ಪ್ರಸಕ್ತ ಸ್ಥಳದ ಬಗ್ಗೆ ನಿಗಾ ಇರಿಸಲಾಗಿದೆ. ಅವರು ಪರಾರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ವೇಡನ್ ಅವರು ಕೇರಳ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದು ವಿಚಾರಣೆಗೆ ಬರುವವರೆಗೆ ತನಿಖೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆ ನಡೆಸುವುದು ಹಾಗೂ ಪುರಾವೆಗಳನ್ನು ಸಂಗ್ರಹಿಸುವುದು ಮುಂದುವರಿಯುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈದ್ಯೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ತ್ರಿಕ್ಕಾಕರ ಪೊಲೀಸ್ ಠಾಣೆಯಲ್ಲಿ ರ್ಯಾಪರ್ ವೇಡನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಹಾಗೂ 376 (2)(ಎನ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.







