ಎಸ್ಐಆರ್ ಹಂತ 2 ಚುನಾವಣಾ ಅಧಿಕಾರಿಗಳ ಸಾವುಗಳು: ಬಿಜೆಪಿಗೆ ಖರ್ಗೆ ತರಾಟೆ

ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ,ನ.23: ಪ್ರಸಕ್ತ ನಡೆಯುತ್ತಿರುವ ಎರಡನೇ ಹಂತದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಕೆಲಸದ ಹೊರೆಯಿಂದಾಗಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ)ಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಓರ್ವ ಬಿಎಲ್ಒ ಆತ್ಮಹತ್ಯೆ, ನಂತರ ಪಶ್ಚಿಮ ಬಂಗಾಳದಲ್ಲಿಯೂ ಇಂತಹುದೇ ಘಟನೆಯ ಬಳಿಕ ವಿವಾದ ಭುಗಿಲೆದ್ದಿದೆ.
ಆರು ರಾಜ್ಯಗಳಲ್ಲಿ 16 ಬಿಎಲ್ಒಗಳು ಸಾವನ್ನಪಿದ್ದಾರೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ತನ್ನ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಖರ್ಗೆ, ಚುನಾವಣಾ ವಂಚನೆಯು ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯನ್ನು ‘ಬಲವಂತದ ಕ್ರಮ’ ಎಂದು ಬಣ್ಣಿಸಿರುವ ಅವರು ಅದನ್ನು ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ ಸಮಯಗಳಿಗೆ ಹೋಲಿಸಿದ್ದಾರೆ. ಬಿಎಲ್ಒಗಳ ಸಾವುಗಳ ಕುರಿತು ಚುನಾವಣಾ ಆಯೋಗದ ಮೌನವನ್ನೂ ಅವರು ಪ್ರಶ್ನಿಸಿದ್ದಾರೆ.
‘ಬಿಜೆಪಿಯ ಮತಗಳ್ಳತನ ಈಗ ಮಾರಣಾಂತಿಕ ತಿರುವನ್ನು ಪಡೆದುಕೊಂಡಿದೆ. ಅತಿಯಾದ ಕೆಲಸದ ಹೊರೆಯಿಂದಾಗಿ ಬಿಎಲ್ಒಗಳು ಮತ್ತು ಮತಗಟ್ಟೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪೀತಿಪಾತ್ರನ್ನು ಕಳೆದುಕೊಂಡಿರುವ ಪ್ರತಿಯೊಂದೂ ಕುಟುಂಬಕ್ಕೆ ನನ್ನ ಗಾಢ ಸಂತಾಪಗಳು. ವಾಸ್ತವದಲ್ಲಿ ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚಾಗಿದ್ದು,ಇದು ಅತ್ಯಂತ ಆತಂಕಕಾರಿಯಾಗಿದೆ. ಈ ಕುಟುಂಬಗಳಿಗೆ ನ್ಯಾಯವನ್ನು ಒದಗಿಸುವವರು ಯಾರು? ಬಿಜೆಪಿ ಮತಗಳ್ಳತನದ ಮೂಲಕ ಅಧಿಕಾರದ ರುಚಿಯನ್ನು ಅನುಭವಿಸುವುದರಲ್ಲಿ ವ್ಯಸ್ತವಾಗಿದ್ದರೆ,ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ. ಯಾವುದೇ ಪೂರ್ವ ಯೋಜನೆಯಿಲ್ಲದ ಅವಸರದ,ಬಲವಂತದ ಎಸ್ಐಆರ್ ನೋಟು ನಿಷೇಧ ಮತ್ತು ಕೋವಿಡ್ ಲಾಕ್ಡೌನ್ಗಳನ್ನು ನೆನಪಿಸಿದೆ ಎಂದಿದ್ದಾರೆ.
ಆತ್ಮಹತ್ಯೆಗಳು ಬಿಜೆಪಿಯ ಅಧಿಕಾರದಾಹದ ಫಲಶ್ರುತಿ ಎಂದು ಬಣ್ಣಿಸಿರುವ ಖರ್ಗೆ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎಸ್ಐಆರ್ ವಿರುದ್ಧ ಧ್ವನಿಯೆತ್ತುವಂತೆ ಜನತೆಯನ್ನು ಆಗ್ರಹಿಸಿದ್ದಾರೆ.







