ಪ್ರಧಾನಿ ಮೋದಿಗೆ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ: "ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ” ಎಂದು ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಗುರುವಾರ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಟೀಕಿಸಿದ ಅವರು, “ಸರಕಾರ ಸದನವನ್ನು ಪ್ರಜಾಸತ್ತಾತ್ಮಕವಾಗಿ ನಡೆಸಲು ಬಯಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಮೋದಿ, ಕೇವಲ ಸುಳ್ಳುಗಳನ್ನೇ ಪುನರಾವರ್ತಿಸಿದ್ದಾರೆ” ಎಂದು ಅವರು ಟೀಕಿಸಿದರು.
“ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ಮಾತನಾಡಲು ಮುಂದಾದಾಗ, ಅದಕ್ಕೆ ಅವಕಾಶ ನೀಡಲಿಲ್ಲ. ಆ ಪುಸ್ತಕ ಪ್ರಕಟವೇ ಆಗಿಲ್ಲ ಎಂದು ಕೇಂದ್ರದ ಹಿರಿಯ ಸಚಿವರು ಹೇಳಿದರು. ವಾಸ್ತವವೆಂದರೆ, ಈ ಪುಸ್ತಕ ಚಾಲ್ತಿಯಲ್ಲಿದೆ ಅವರು ಹೇಳಿದರು.
“ಮೋದಿ, ಸತ್ಯವನ್ನು ಆಲಿಸಿ, ಬಳಿಕ ಉತ್ತರಿಸಿ” ಎಂದು ಆಗ್ರಹಿಸಿದ ಖರ್ಗೆ, “ಪ್ರಧಾನಿ ಮೋದಿಯವರಿಗೆ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲ” ಎಂದು ಟೀಕಿಸಿದರು.
“ಕಾಂಗ್ರೆಸ್ ಪಕ್ಷವು ಸಿಖ್ಖರನ್ನು ಅವಮಾನಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸದನದ ಹೊರಗೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯನ್ನು ಹೀಗೆ ವ್ಯಾಖ್ಯಾನಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಸಿಖ್ಖರನ್ನು ಬಹಳವಾಗಿ ಗೌರವಿಸುತ್ತದೆ. ಕಾಂಗ್ರೆಸ್ ಪಕ್ಷದಿಂದ ಡಾ. ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ, ಬಳಿಕ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು” ಎಂದು ಅವರು ನೆನಪಿಸಿದರು.
“ಮೋದಿಯವರ ಹೇಳಿಕೆಗಳನ್ನು ಗಮನಿಸಿದರೆ, ಅವರ ನೈತಿಕ ಸ್ಥೈರ್ಯ ಕುಗ್ಗಿದೆ” ಎಂದು ಅವರು ಟೀಕಿಸಿದರು.
“ಗುಪ್ತಚರ ಮಾಹಿತಿಯ ಮೇರೆಗೆ ಸದನದಲ್ಲಿ ಪ್ರತಿಕ್ರಿಯಿಸದಂತೆ ಮೋದಿ ಅವರಿಗೆ ನಾನು ಸಲಹೆ ನೀಡಿದ್ದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಆದರೆ, ಪುಲ್ವಾಮಾದಂತಹ ಭಯೋತ್ಪಾದಕ ದಾಳಿ ನಡೆಯುವ ಸಂದರ್ಭದಲ್ಲಿ ಈ ಗುಪ್ತಚರ ಎಲ್ಲಿ ಹೋಗಿತ್ತು? ದೇಶದಲ್ಲಿ ಗುಂಪು ಹಲ್ಲೆಗಳು ನಡೆಯುತ್ತಿವೆ, ದಲಿತರು, ಆದಿವಾಸಿಗಳ ಮೇಲೆ ದಾಳಿಗಳು ನಡೆಯುತ್ತಿವೆ. ಹಾಗಾದರೆ, ಈ ಗುಪ್ತಚರ ಎಲ್ಲಿಗೆ ಹೋಗಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡರು.
ಸತ್ಯವೇನೆಂದರೆ, ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ನರೇಂದ್ರ ಮೋದಿಯವರ ಹೆಸರು ಉಲ್ಲೇಖವಾಗಿರುವುದರಿಂದ, ಅವರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಇದಾದ ಬಳಿಕ ಅವರು ಟ್ರಂಪ್ ಗೆ ಶರಣಾಗಿ, ಅವರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ” ಎಂದು ಅವರು ಆರೋಪಿಸಿದರು.







