ಮಧ್ಯಪ್ರದೇಶ | ಅಪೌಷ್ಟಿಕತೆಯಿಂದ ಮತ್ತೊಂದು ಮಗು ಮೃತ್ಯು, ಪುನರ್ವಸತಿ ಕೇಂದ್ರಗಳ ದಾಖಲಾತಿಗಳಲ್ಲೂ ಹೆಚ್ಚಳ!

Photo credit: NDTV
ಭೋಪಾಲ್: ಮಧ್ಯಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಮತ್ತೊಂದು ಮಗು ಮೃತಪಟ್ಟಿದೆ. ಇದು ರಾಜ್ಯದ ಆರೋಗ್ಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ ಎಂದು NDTV ವರದಿ ಮಾಡಿದೆ.
ಶಿವಪುರಿಯ 15 ತಿಂಗಳ ಮಗು ದಿವ್ಯಾಂಶಿ ಜಿಲ್ಲಾಸ್ಪತ್ರೆಯಲ್ಲಿ ಅಪೌಷ್ಟಿಕತೆಯಿಂದ ಮೃತಪಟ್ಟಿದೆ. ಮಗುವಿನ ತೂಕ ಮತ್ತು ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಿದ್ದ ಕಾರಣ ಮಗು ಬದುಕುಳಿಯುವುದು ಕಷ್ಟಕರವಾಗಿತ್ತು. ಮಗುವನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಆದರೆ ಹೆಣ್ಣು ಮಗುವಾಗಿದ್ದ ಕಾರಣ ಅತ್ತೆ-ಮಾವ ಚಿಕಿತ್ಸೆಗೆ ಅಡ್ಡಿಪಡಿಸಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. "ಮಗು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ, ಹೆಣ್ಣು ಮಗುವೆಂದು ಸಾಯಲು ಬಿಡುವಂತೆ ಅತ್ತೆ-ಮಾವ ಹೇಳಿದ್ದರು” ಎಂದು ಮಗುವಿನ ತಾಯಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಶಿಯೋಪುರದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 1.5 ವರ್ಷದ ಮಗು ರಾಧಿಕಾ ಅಪೌಷ್ಠಿಕತೆಯಿಂದ ಮೃತಪಟ್ಟಿತ್ತು. ಈಗ ಒಂದರ ನಂತರ ಒಂದರಂತೆ ಅಪೌಷ್ಠಿಕತೆಯಿಂದ ಮಕ್ಕಳ ಸಾವು ಮಧ್ಯಪ್ರದೇಶವು ಭಾರತದಲ್ಲಿ ಅಪೌಷ್ಟಿಕತೆಯ ಕೇಂದ್ರಬಿಂದುವಾಗಿ ಉಳಿದಿದೆ ಎಂಬುದನ್ನು ಬಹಿರಂಗಪಡಿಸಿದೆ.
ಮಧ್ಯಪ್ರದೇಶ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಅಧಿಕೃತ ಅಂಕಿಅಂಶಗಳ ಪ್ರಕಾರ, 2020ರಿಂದ ಜೂನ್ 2025ರವರೆಗೆ ಬುಡಕಟ್ಟು ಪ್ರದೇಶಗಳಲ್ಲಿನ ಪೋಷಣಾ ಪುನರ್ವಸತಿ ಕೇಂದ್ರಗಳಿಗೆ ಅಪೌಷ್ಠಿಕತೆಯಿಂದ 85,330 ಮಕ್ಕಳನ್ನು ದಾಖಲಿಸಲಾಗಿದೆ. 2020- 21ರಲ್ಲಿ 11,566 ಮಕ್ಕಳನ್ನು ಅಪೌಷ್ಟಿಕತೆಯಿಂದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದು 2024-25ರಲ್ಲಿ 20,741ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ 5,928 ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದೆ.
ಮಧ್ಯಪ್ರದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸರಕಾರಿ ದಾಖಲೆಗಳು ತಿಳಿಸುತ್ತದೆ. ಅದರಲ್ಲಿ 1.36 ಲಕ್ಷ ಮಕ್ಕಳು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಕ್ತಹೀನತೆಯಿಂದ ಈ ಬಿಕ್ಕಟ್ಟು ಜಟಿಲವಾಗಿದೆ. ಮಧ್ಯಪ್ರದೇಶದಲ್ಲಿ 57% ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಜನನದ ಮೊದಲೇ ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.







