ಹಿಂಬಾಗಿಲಿನಿಂದ ಎನ್ಆರ್ಸಿಯ ಅನುಷ್ಠಾನಕ್ಕೆ ಚುನಾವಣಾ ಆಯೋಗ ಯತ್ನ: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ | PC : PTI
ಶ್ರೀನಗರ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಹೆಸರಲ್ಲಿ 1987 ಜುಲೈ ಹಾಗೂ 2004 ಡಿಸೆಂಬರ್ ನಡುವೆ ಜನಿಸಿದ ಮತದಾರರನ್ನು ಪ್ರತ್ಯೇಕಿಸುತ್ತಿರುವುದಕ್ಕೆ ಹಾಗೂ ಅವರ ಪೌರತ್ವಕ್ಕೆ ದಾಖಲೆ ರೂಪದ ಸಾಕ್ಷಗಳನ್ನು ಒದಗಿಸುವಂತೆ ಕೋರುತ್ತಿರುವುದಕ್ಕೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಚುನಾವಣಾ ಆಯೋಗವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ಈ ಕ್ರಮ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಗೊಳಿಸುವ ಪ್ರಯತ್ನವೇ ಎಂದು ಪ್ರಶ್ನಿಸಿದ್ದಾರೆ.
ಪೂರ್ಬ ಮೇಧಿನಪುರದ ಕರಾವಳಿ ಪಟ್ಟಣವಾದ ದಿಘಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಅತ್ಯಂತ ಕಳವಳಕಾರಿ ವಿಚಾರದ ಬಗ್ಗೆ ತಿಳಿಸಲು ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದರು.
‘‘ನಾನು ಚುನಾವಣಾ ಆಯೋಗದಿಂದ ಎರಡು ಪತ್ರಗಳನ್ನು ಸ್ವೀಕರಿಸಿದ್ದೇನೆ. ಪ್ರತಿ ಪತ್ರ 25-30 ಪುಟಗಳನ್ನು ಒಳಗೊಂಡಿದೆ. ನನಗೆ ಆ ಪತ್ರಗಳನ್ನು ಇದುವರೆಗೆ ವಿವರವಾಗಿ ಓದಲು ಸಾಧ್ಯವಾಗಿಲ್ಲ. ಆದರೆ, ಮೇಲ್ನೋಟಕ್ಕೆ ಅರ್ಥ ಮಾಡಿಕೊಂಡಿದ್ದೇನೆ. ಅದರ ಪ್ರಕಾರ ಚುನಾವಣಾ ಆಯೋಗ ಈಗ 1987 ಜುಲೈ 1ರಿಂದ 2004 ಡಿಸೆಂಬರ್ 2ರ ನಡುವೆ ಜನಿಸಿದ ಮತದಾರರಿಂದ ಘೋಷಣಾ ಪತ್ರವನ್ನು ಕೋರಿದೆ’’ ಎಂದಿದ್ದಾರೆ.
ಚುನಾವಣಾ ಆಯೋಗದ ಈ ನಡೆ ಅಥವಾ ಈ ದಿನಾಂಕಗಳನ್ನು ಆಯ್ಕೆ ಮಾಡುವ ಹಿಂದಿರುವ ತಾರ್ಕಿಕತೆಯ ಹಿಂದಿನ ಕಾರಣ ನನಗೆ ಇದುವರೆಗೆ ಅರ್ಥ ಆಗಿಲ್ಲ. ಅವರು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಹಿಂಬಾಗಿಲಿನ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಬಗ್ಗೆ ನಾನು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಪತ್ರವನ್ನು ಬಿಹಾರ್ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಅದರ ಒಂದು ಪ್ರತಿಯನ್ನು ನನಗೆ ಕೂಡ ರವಾನಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.







