"ಬೃಹತ್ ಹಗರಣ": ಎಸ್ಐಆರ್ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಮಮತಾ ಬ್ಯಾನರ್ಜಿ | Photo Credit ; PTI
ಕೋಲ್ಕತಾ,ಡಿ.30: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ‘ಬೃಹತ್ ಹಗರಣ’ ಎಂದು ಮಂಗಳವಾರ ಬಣ್ಣಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರನ ಹೆಸರನ್ನು ಅಳಿಸಿದರೆ ದಿಲ್ಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಬಂಕುರಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಮತಾ, ಎಸ್ಐಆರ್ ಹೆಸರಿನಲ್ಲಿ ರಾಜ್ಯದ ಜನರನ್ನು ಹಿಂಸಿಸಲಾಗುತ್ತಿದೆ. ಎಸ್ಐಆರ್ನಿಂದಾಗಿ ಸುಮಾರು 60 ಜನರು ಮೃತಪಟ್ಟಿದ್ದಾರೆ. ದಾಖಲೆಗಳ ಪರಿಶೀಲನೆಗಾಗಿ ವೃದ್ಧರನ್ನು ಕರೆಸಲಾಗುತ್ತಿದೆ ಎಂದು ಆರೋಪಿಸಿದರು. ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರನ ಹೆಸರನ್ನು ಅಳಿಸಿದರೂ ಟಿಎಂಸಿಯು ದಿಲ್ಲಿಯಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಅವರು ಘೋಷಿಸಿದರು. ಎಸ್ಐಆರ್ನ್ನು ಕೃತಕ ಬುದ್ಧಿಮತ್ತೆಯ ನೆರವಿನೊಂದಿಗೆ ನಡೆಸಲಾಗುತ್ತಿರುವ ಬೃಹತ್ ಹಗರಣ ಎಂದು ಬಣ್ಣಿಸಿದ ಬ್ಯಾನರ್ಜಿ, ರಾಜ್ಯದ ಜನರು ಇಂತಹ ಕಿರುಕುಳವನ್ನು ಸಹಿಸುವುದಿಲ್ಲ ಎಂದರು.
ಬಿಜೆಪಿ ಪ.ಬಂಗಾಳದಲ್ಲಿ ಅಧಿಕಾರಕ್ಕೆ ಬರಲು ಜನರು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಮಮತಾ ಬ್ಯಾನರ್ಜಿ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ವಿರುದ್ಧ ದಾಳಿಗಳಿಗಾಗಿ ಕೇಸರಿ ಪಕ್ಷವನ್ನು ತರಾಟೆಗೆತ್ತಿಕೊಂಡರು.
ಚುನಾವಣೆಗಳು ಬಂದಾಗಲೆಲ್ಲ ‘ಸೋನಾರ್ ಬಾಂಗ್ಲಾ’ ನಿರ್ಮಿಸುವುದಾಗಿ ಬಿಜೆಪಿ ಭರವಸೆ ನೀಡುತ್ತದೆ. ಆದರೆ ವಾಸ್ತವದಲ್ಲಿ ಅದು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವವರನ್ನು ಥಳಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್ಐಆರ್ನ ಆರಂಭಿಕ ಹಂತದ ಬಳಿಕ ಡಿ.16ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಗಳಿಂದ 58 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಒಟ್ಟು 7.6 ಕೋಟಿ ಮತದಾರರ ಪೈಕಿ ಸುಮಾರು 1.66 ಕೋಟಿ ಮತದಾರರ ‘ಪ್ರಾಮಾಣಿಕತೆ’ಯ ಬಗ್ಗೆ ಚುನಾವಣಾ ಆಯೋಗವು ಶಂಕೆಯನ್ನು ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಅವರ ದಾಖಲೆಗಳ ಪರಿಶೀಲನೆಗಾಗಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಿದೆ.







