‘ನಿರಂಕುಶ’ SIR ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮಮತಾ ಬ್ಯಾನರ್ಜಿ ಸಜ್ಜು

ಮಮತಾ ಬ್ಯಾನರ್ಜಿ | Photo Credit ; PTI
ಕೋಲ್ಕತಾ,ಜ.5: ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗದೊಂದಿಗೆ ತನ್ನ ಸಂಘರ್ಷವನ್ನು ತೀವ್ರಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ವಿರುದ್ಧ ತಾನು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಎಸ್ಐಆರ್ಗೆ ಸಂಬಂಧಿಸಿದ ಭೀತಿ, ಕಿರುಕುಳ ಮತ್ತು ಆಡಳಿತಾತ್ಮಕ ನಿರಂಕುಶತೆ ಜನರ ಸಾವುಗಳು ಮತ್ತು ಅವರು ಆಸ್ಪತ್ರೆಗೆ ಸೇರಲು ಕಾರಣವಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಸೋಮವಾರ ದಕ್ಷಿಣ 24 ಪರಗಣಗಳ ಜಿಲ್ಲೆಯ ಸಾಗರ ದ್ವೀಪದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, 2026ರ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳಲು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಮನಬಂದಂತೆ ಅಳಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಅನೌಪಚಾರಿಕ ಡಿಜಿಟಲ್ ವೇದಿಕೆಗಳನ್ನು ಬಳಸಲಾಗುತ್ತಿದ್ದು, ತನ್ಮೂಲಕ ಪ್ರಜಾಸತ್ತಾತ್ಮಕ ಸುರಕ್ಷತೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದರು.
‘ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳಲು ಮತ್ತು ಹಲವಾರು ಜನರ ಸಾವುಗಳಿಗೆ ಕಾರಣವಾಗಿರುವ ಎಸ್ಐಆರ್ ವಿರುದ್ಧ ನಾವು ಮಂಗಳವಾರ ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ’ ಎಂದು ತಿಳಿಸಿದ ಅವರು ಅಗತ್ಯವಾದರೆ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಸಿದ್ಧವಿರುವುದಾಗಿ ಹೇಳಿದರು. ಆದಾಗ್ಯೂ ಅರ್ಜಿಯನ್ನು ತಾನು ವೈಯಕ್ತಿಕವಾಗಿ ಸಲ್ಲಿಸಲಿದ್ದೇನೆಯೇ,ರಾಜ್ಯ ಸರಕಾರ ಅಥವಾ ತನ್ನ ಪಕ್ಷ ಟಿಎಂಸಿ ಸಲ್ಲಿಸಲಿದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ.
ನ್ಯಾಯವಾದಿಯಾಗಿ ಅಲ್ಲ,ಸಾಮಾನ್ಯ ಪ್ರಜೆಯಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಾಗಲು ತಾನು ಅನುಮತಿ ಕೋರುವುದಾಗಿ ತಿಳಿಸಿದ ಮಮತಾ,‘ಅಗತ್ಯವಾದರೆ ನಾನು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇನೆ ಮತ್ತು ಜನರ ಪರವಾಗಿ ವಾದಿಸುತ್ತೇನೆ’ ಎಂದರು. ತಾನು ಕಾನೂನು ತರಬೇತಿಯನ್ನು ಪಡೆದಿರುವುದಾಗಿ ಅವರು ನೆನಪಿಸಿದರು.







