"ಅವರು ನಮ್ಮನ್ನು ಅವಮಾನಿಸಿದರು; ಸಂತ್ರಸ್ತರ ಅಳಲು ಆಲಿಸಲಿಲ್ಲ": ಚುನಾವಣಾ ಆಯೋಗದ ಸಭೆಯಿಂದ ಹೊರ ನಡೆದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ | Photo Credit : PTI
ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್)ಗೆ ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಜೊತೆಗೆ ಸೋಮವಾರ ನಡೆದ ಸಭೆಯಿಂದ ಅರ್ಧದಲ್ಲೇ ಹೊರನಡೆದಿದ್ದಾರೆ.
ಚುನಾವಣಾ ಆಯೋಗವು ತನ್ನನ್ನು ಅವಮಾನಿಸಿದೆ ಹಾಗೂ ಸಂತ್ರಸ್ತ ಕುಟುಂಬಗಳ ಅಳಲನ್ನು ಆಲಿಸಲು ನಿರಾಕರಿಸಿದೆ ಎಂದು ಬಳಿಕ ಅವರು ಆರೋಪಿಸಿದರು.
ಟಿಎಂಸಿಯ ಹಿರಿಯ ನಾಯಕರು ಮತ್ತು ಎಸ್ಐಆರ್ ಪ್ರಕ್ರಿಯೆಯಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳೊಂದಿಗೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಹಾಜರಾದರು.
ಚುನಾವಣಾ ಆಯೋಗವು ಸಂತ್ರಸ್ತರ ಅಳಲನ್ನು ಆಲಿಸಲು ನಿರಾಕರಿಸಿದ ಬಳಿಕ, ಸಭೆಯಿಂದ ಹೊರನಡೆಯುವ ನಿರ್ಧಾರವನ್ನು ತನ್ನ ನಿಯೋಗ ತೆಗೆದುಕೊಂಡಿತು ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ಭಾರತೀಯ ಚುನಾವಣಾ ಆಯೋಗವು ನಮ್ಮನ್ನು ಅವಮಾನಿಸಿದೆ. ಅವರು ನಮ್ಮ ಮಾತುಗಳನ್ನು ಆಲಿಸಲು ನಿರಾಕರಿಸಿದರು. ಹಾಗಾಗಿ ನಾವು ಸಭೆಯಿಂದ ಹೊರನಡೆದೆವು’’ ಎಂದು ಅವರು ಹೇಳಿದರು.
ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಲು ಮುಖ್ಯ ಚುನಾವಣಾ ಆಯುಕ್ತರು ಕಳೆದ ವಾರ ಒಪ್ಪಿದ ಬಳಿಕ ಸೋಮವಾರಕ್ಕೆ ಸಭೆಯನ್ನು ನಿಗದಿಪಡಿಸಲಾಗಿತ್ತು.
ಚುನಾವಣಾ ಆಯೋಗವು ತನಗೆ ಬೇಕಾದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಮಾತ್ರ ಮತಪಟ್ಟಿಗಳ ತೀವ್ರ ಪರಿಷ್ಕರಣೆ ನಡೆಸುತ್ತಿದೆ, ಉಳಿದ ರಾಜ್ಯಗಳನ್ನು ಬಿಡುತ್ತಿದೆ ಎಂದು ಮಮತಾ ಆರೋಪಿಸಿದರು.
‘‘ಎಸ್ಐಆರ್ ನಡೆಸಲೇಬೇಕಾಗಿದ್ದರೆ, ಸರಿಯಾದ ಸಿದ್ಧತೆಗಳೊಂದಿಗೆ ಅದನ್ನು ಮಾಡಬೇಕಾಗಿತ್ತು, ಕೇವಲ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮಾತ್ರ ಅಲ್ಲ. ನೀವು ಬಿಜೆಪಿ ಸರಕಾರವಿರುವ ಅಸ್ಸಾಂ ನಲ್ಲಿ ಎಸ್ಐಆರ್ ಮಾಡಿಲ್ಲ. ಆದರೆ, ನೀವು ಪಶ್ಚಿಮಬಂಗಾಳ ಮತ್ತು ತಮಿಳು ನಾಡಿನಲ್ಲಿ ಮಾಡಿದ್ದೀರಿ’’ ಎಂದು ಅವರು ಹೇಳಿದರು.
‘‘ಪಶ್ಚಿಮಬಂಗಾಳದಲ್ಲಿ ಮತದಾರರ ಪಟ್ಟಿಯಿಂದ 58 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ತಮ್ಮನ್ನು ಸಮರ್ಥಿಸಿಕೊಳ್ಳಲು ಅವರಿಗೆ ನ್ಯಾಯೋಚಿತ ಅವಕಾಶವನ್ನೇ ನೀಡಲಾಗಿಲ್ಲ’’ ಎಂದು ಮಮತಾ ಹೇಳಿದರು.
ಕೋರಲಾಗಿರುವ ದಾಖಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಹಳೆಯ ದಾಖಲೆಗಳನ್ನು ತರುವಂತೆ ಮತದಾರರನ್ನು ಕೇಳುವ ಔಚಿತ್ಯವನ್ನು ಪ್ರಶ್ನಿಸಿದರು. ‘‘ತಂದೆಯಂದಿರ ಜನನ ಪ್ರಮಾಣಪತ್ರಗಳನ್ನು ತರುವಂತೆ ಈಗ ಕೇಳಿದರೆ ಎಲ್ಲಿಂದ ತರುವುದು? ಹಿಂದೆ, ಹೆಚ್ಚಿನ ಮಕ್ಕಳು ಮನೆಯಲ್ಲೇ ಜನಿಸುತ್ತಿದ್ದರು, ಆಸ್ಪತ್ರೆಗಳಲ್ಲಿ ಅಲ್ಲ’’ ಎಂದರು.
ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬ ಎಂಬುದಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ಅದೇ ವೇಳೆ, ಈ ಆರೋಪಗಳನ್ನು ಚುನಾವಣಾ ಆಯೋಗದ ಮೂಲಗಳು ನಿರಾಕರಿಸಿವೆ.
ಮುಖ್ಯ ಚುನಾವಣಾ ಆಯುಕ್ತರು ಸಂತ್ರಸ್ತರ ದೂರುಗಳನ್ನು ಮತ್ತು ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸುತ್ತಿದ್ದರು. ಆಗ ಮಮತಾ ಕೋಪಗೊಂಡು ಮೇಜು ಗುದ್ದಿದರು ಹಾಗೂ ಒಮ್ಮೆಲೆ ಸಭೆಯಿಂದ ಹೊರನಡೆದರು ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿಕೊಂಡಿವೆ ಎಂದು ‘ನ್ಯೂಸ್18’ ವರದಿ ಮಾಡಿದೆ.
‘ಇಂಥ ಚುನಾವಣಾ ಆಯೋಗವನ್ನು ಎಂದೂ ನೋಡಿಲ್ಲ’:
ನನ್ನ ಸುದೀರ್ಘ ರಾಜಕೀಯ ಬದುಕಿನಲ್ಲಿ ಚುನಾವಣಾ ಆಯೋಗದ ಇಂಥ ವರ್ತನೆಯನ್ನು ಎಂದೂ ನೋಡಿಲ್ಲ ಎಂದು ಮಮತಾ ಬ್ಯಾನರ್ಜಿ ಭಾವುಕರಾಗಿ ಹೇಳಿದರು.
‘‘ನಾನು ನಾಲ್ಕು ಬಾರಿ ಕೇಂದ್ರ ಸಚಿವೆಯಾಗಿದ್ದೆ ಮತ್ತು ಏಳು ಬಾರಿ ಸಂಸದೆಯಾಗಿದ್ದೆ. ಇಷ್ಟು ಅಹಂಕಾರದ ಮತ್ತು ಅಸತ್ಯ ತುಂಬಿದ ಚುನಾವಣಾ ಆಯುಕ್ತರನ್ನು ನಾನೆಂದೂ ನೋಡಿಲ್ಲ’’ ಎಂದು ಅವರು ನುಡಿದರು.
‘‘ನಾನು ಸಂಸ್ಥೆಯನ್ನು ಗೌರವಿಸುತ್ತೇನೆ. ಆದರೆ, ಪಶ್ಚಿಮಬಂಗಾಳಕ್ಕೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ’’ ಎಂದರು.







