ಬಿಜೆಪಿ ‘ಮಾಯ ಮಾಡುವ ಆಯೋಗ’ವನ್ನು ದುರುಪಯೋಗ ಪಡಿಸುತ್ತಿದೆ : ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ, ಮಾ. 8: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಬಳಿಕ, ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ‘‘ಸ್ವೇಚ್ಛಾಚಾರದಿಂದ ಹೆಸರುಗಳನ್ನು ತೆಗೆದುಹಾಕಿರುವುದನ್ನು’’ ಪ್ರತಿಭಟಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ರವಿವಾರ ಮೂರನೇ ದಿನವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ತೀವ್ರಗೊಳಿಸಿದ ಅವರು, ಮತದಾರರ ಪಟ್ಟಿಗಳಿಂದ ಕಾನೂನುಬದ್ಧ ಮತದಾರರನ್ನು ತೆಗೆದುಹಾಕಲು ಬಿಜೆಪಿಯು ‘‘ಮಾಯ ಮಾಡುವ ಆಯೋಗ’’ (ಚುನಾವಣಾ ಆಯೋಗ)ವನ್ನು ದುರುಪಯೋಗಗೊಳಿಸುತ್ತಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುನ್ನ ಸಿದ್ಧತೆಗಳ ಪರಿಶೀಲನೆಗೆ ಚುನಾಣಾ ಆಯೋಗದ ಪೂರ್ಣಪೀಠವು ಕೋಲ್ಕತಾಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ. ‘‘ತನ್ನ ‘ಒಂದು ದೇಶ, ಒಬ್ಬ ನಾಯಕ, ಒಂದು ಪಕ್ಷ’ ಸಿದ್ಧಾಂತದಿಂದ ಬೀಗುತ್ತಿರುವ ಬಿಜೆಪಿಯು ತನ್ನ ಜನವಿರೋಧಿ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ವ್ಯವಸ್ಥಿತವಾಗಿ ಪ್ರತಿಯೊಂದು ಪ್ರಜಾಪ್ರಭುತ್ವದ ಸಂಸ್ಥೆಗಳನ್ನುವ ವ್ಯವಸ್ಥಿತವಾಗಿ ಶಸ್ತ್ರಗಳನ್ನಾಗಿಸುತ್ತಿದೆ’’ ಎಂದು ಮಮತಾ ಆರೋಪಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಸ್ಥಾನದಲ್ಲಿ ‘‘ತನ್ನ ಪಕ್ಷದ ಪ್ರಣಾಳಿಕೆ’’ಯನ್ನು ತರುವುದು ಬಿಜೆಪಿಯ ಅಂತಿಮ ಗುರಿಯಾಗಿದೆ ಎಂದು ಅವರು ಹೇಳಿದರು.
‘‘ಅವರು ವರ್ಷಗಳ ಕಾಲ, ಕೇಂದ್ರೀಯ ಸಂಸ್ಥೆಗಳು, ರಾಷ್ಟ್ರೀಯ ಆಯೋಗಗಳು, ಗುಲಾಮಿ ಗೋದಿ ಮಾಧ್ಯಮಗಳು ಮತ್ತು ನ್ಯಾಯಾಂಗದ ವಿಧೇಯ ವರ್ಗವೊಂದನ್ನು ಬಂಗಾಳದ ವಿರುದ್ಧ ಛೂ ಬಿಟ್ಟರು. ಈಗ ಅವರು ಮತದಾರರ ಪಟ್ಟಿಗಳಿಂದ ಕಾನೂನುಬದ್ಧ ಮತದಾರರ ಹೆಸರುಗಳನ್ನು ಮಾಯ ಮಾಡಿಸುವುದಕ್ಕಾಗಿ ‘ಮಾಯ ಮಾಡುವ ಆಯೋಗ’ವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’’ ಎಂದು ಅವರು ಆರೋಪಿಸಿದರು.
ಬಿಜೆಪಿ ನಾಯಕತ್ವವನ್ನು ‘‘ದಿಲ್ಲಿಯ ಜಮೀನುದಾರರು’’ ಎಂಬುದಾಗಿ ಬಣ್ಣಿಸಿದ ಮಮತಾ, ಬಂಗಾಳವನ್ನು ತಮ್ಮ ಅಡಿಯಾಳಾಗಿ ಮಾಡಿಕೊಳ್ಳುವ ಅವರ ಯೋಜನೆ ಎಂದಿಗೂ ಫಲಿಸುವುದಿಲ್ಲ ಎಂದರು.







