ಮಮತಾ ಬ್ಯಾನರ್ಜಿ ವಿರುದ್ಧ ‘ಕಡತ ಕಿತ್ತುಕೊಂಡ’ ಆರೋಪ ಹೊರಿಸಿ ಹೈಕೋರ್ಟ್ ಮೆಟ್ಟಿಲೇರಿದ ED

Photo: indiatoday
ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ I-PAC ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ಶೋಧದ ವೇಳೆ ಕಡತಗಳನ್ನು ಬಲವಂತವಾಗಿ ತೆಗೆದುಹಾಕಲಾಗಿದೆ ಎಂಬ ಆರೋಪದ ಕುರಿತ ವಿವಾದ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ. ಈಡಿ ಮತ್ತು I-PAC ಪರಸ್ಪರ ಅರ್ಜಿಗಳನ್ನು ಸಲ್ಲಿಸಿದೆ.
ಬಂಗಾಳದ ಕಲ್ಲಿದ್ದಲು ಗಣಿಗಾರಿಕೆ ಹಗರಣದ ತನಿಖೆಗೆ ಸಂಬಂಧಿಸಿ ಶೋಧ ನಡೆಸಲಾಗಿದೆ ಎಂದು ಈಡಿ ಹೇಳಿದೆ. ಶೋಧದ ವೇಳೆ ತನಿಖೆಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿರುವ ಈಡಿ, ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು “ಬಲವಂತವಾಗಿ ಕಿತ್ತುಕೊಂಡಿದ್ದಾರೆ” ಎಂದು ದೂರಿದೆ.
ಈಡಿ ವಿವರದ ಪ್ರಕಾರ, ಕೋಲ್ಕತ್ತಾದಲ್ಲಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸ ಹಾಗೂ ಸಂಸ್ಥೆಯ ಕಚೇರಿಯಲ್ಲಿ ಶೋಧ ಆರಂಭದಲ್ಲಿ ಶಾಂತಿಯುತವಾಗಿತ್ತು. ಆದರೆ ಮುಖ್ಯಮಂತ್ರಿ ಹೆಚ್ಚಿನ ಸಂಖ್ಯೆಯ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಬಳಿಕ ಮಹತ್ವದ ದಾಖಲೆಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಶೋಧಗಳು “ರಾಜಕೀಯ ಪ್ರೇರಿತ”ವಾಗಿದ್ದು, 2026ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ತಮ್ಮ ಪಕ್ಷದ ಚುನಾವಣಾ ತಂತ್ರ ಮತ್ತು ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯುವ ಉದ್ದೇಶದಿಂದಲೇ ನಡೆಯುತ್ತಿವೆ ಎಂದು ಆರೋಪಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಶೋಧ ನಡೆದಿದೆ ಎಂಬುದನ್ನೂ ಅವರು ಹೇಳಿದರು.
ಇತ್ತ, ಶೋಧದ ವೇಳೆ ಪ್ರಮುಖ ದಾಖಲೆಗಳು ಕಳವಾಗಿವೆ ಎಂದು ಆರೋಪಿಸಿ ಪ್ರತೀಕ್ ಜೈನ್ ಕುಟುಂಬವು ಈಡಿ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಘಟನೆಯ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ನಂತರ ಸಾಲ್ಟ್ ಲೇಕ್ನಲ್ಲಿರುವ I-PAC ಕಚೇರಿಗೂ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆ ತೆರಳಿದ್ದು, ಅಲ್ಲಿಯೂ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಬಲವಂತವಾಗಿ ಹೊರತೆಗೆದಿದ್ದಾರೆ ಎಂದು ಈಡಿ ಆರೋಪಿಸಿದೆ. PMLA ಅಡಿಯಲ್ಲಿ ನಡೆಯುತ್ತಿರುವ ತನಿಖೆಗೆ ಇದು ಅಡ್ಡಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸಂಜೆ ವೇಳೆಗೆ ಮಮತಾ ಬ್ಯಾನರ್ಜಿ I-PAC ಕಚೇರಿಯಲ್ಲಿ ಧರಣಿ ನಡೆಸಿದರು. ಈ ಬೆಳವಣಿಗೆಯ ನಡುವೆ, ತೃಣಮೂಲ ಕಾಂಗ್ರೆಸ್ ಶುಕ್ರವಾರ ರಾಜ್ಯದಾದ್ಯಂತ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.







