West Bengal S I R | ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

Photo : PTI
ಹೊಸದಿಲ್ಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸದ್ಯ ಪ್ರಗತಿಯಲ್ಲಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿರುವ ಮಮತಾ ಬ್ಯಾನರ್ಜಿ, ತಮ್ಮ ಪ್ರಕರಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಅವರು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಜನವರಿ 28ರಂದು ಈ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ನಡೆಸಲು ಅಳವಡಿಸಿಕೊಳ್ಳಲಾಗಿರುವ ವಿಧಾನಗಳು ಹಾಗೂ ಧೋರಣೆಯನ್ನು ಆಕ್ಷೇಪಿಸಿ, ಮಮತಾ ಬ್ಯಾನರ್ಜಿ ಅವರು ಶನಿವಾರ ಸಂಜೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ S I R ಅಭಿಯಾನದಿಂದ ಜನರು ಅಪಾರ ಅನನುಕೂಲ ಹಾಗೂ ಸಂಕಟಕ್ಕೊಳಗಾಗಿದ್ದಾರೆ ಎಂದು ಈ ಹಿಂದಿನ ತಮ್ಮ ಪತ್ರದಲ್ಲಿ ಹೇಳಿದ್ದ ಮಾತನ್ನು ಪುನರುಚ್ಚರಿಸಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆಯಲ್ಲಿ ಈವರೆಗೆ ಸುಮಾರು 140 ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಜಾರಿಯಲ್ಲಿರುವ ಕಾಯ್ದೆ ಮತ್ತು ನಿಯಮಗಳನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ಹೇರಲಾಗಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, “ಈ ಪ್ರಕ್ರಿಯೆಯು ಸಂಪೂರ್ಣವಾಗಿ ಮಾನವ ಹಕ್ಕುಗಳು ಹಾಗೂ ಮೂಲಭೂತ ಮಾನವೀಯ ಪರಿಗಣನೆಗಳ ಉಪೇಕ್ಷೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







