ಬುಲಂದ್ಶಹರ್ ಹಿಂಸಾಚಾರ ಪ್ರಕರಣದ ಆರೋಪಿಯನ್ನು ವಲಯ ಅಧ್ಯಕ್ಷನನ್ನಾಗಿ ನೇಮಿಸಿದ ಬಿಜೆಪಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಉತ್ತರ ಪ್ರದೇಶದ ಸಿಯಾನ ಎಂಬಲ್ಲಿ 2018 ರಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯಾಗಿರುವ ಸಚಿನ್ ಅಹ್ಲಾವತ್ ಎಂಬಾತನ್ನು ಉತ್ತರ ಪ್ರದೇಶ ಬಿಜೆಪಿ ಘಟಕವು ಬುಲಂದ್ಶಹರ್ ವಲಯ ಅಧ್ಯಕ್ಷನನ್ನಾಗಿ ನೇಮಿಸಿದೆ. ಸಿಯಾನದಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಸಹಿತ ಇಬ್ಬರು ಮೃತಪಟ್ಟಿದ್ದರು.
ಮೂವತ್ತೆಂಟು ವರ್ಷದ ಅಹ್ಲಾವತ್ನನ್ನು ಬಿಬಿ ನಗರ ಮಂಡಲ ಬಿಜೆಪಿ ಘಟಕದ ಅಧ್ಯಕ್ಷನನ್ನಾಗಿಯೂ ನೇಮಿಸಲಾಗಿದೆ. ಪ್ರಸ್ತುತ ಜಾಮೀನಿನ ಮೇಲಿರುವ ಅಹ್ಲಾವತ್, ಹಿಂಸೆ ನಡೆಸಿದ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾನೆ.
ಡಿಸೆಂಬರ್ 3, 2018ರಲ್ಲಿ ನಡೆದ ಘಟನೆಯಲ್ಲಿ ಸಿಯಾನ ಪೊಲೀಸ್ ಠಾಣಾಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹಾಗೂ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದರು.
ಈ ಘಟನೆಯಲ್ಲಿ ತನ್ನನ್ನು ಸಿಲುಕಿಸಲಾಗಿದೆ. ತನ್ನ ಗ್ರಾಮವಾದ ಮಹವ್ ಎಂಬಲ್ಲಿ ಏನಾಯಿತೆಂದು ನೋಡಲು ಹೋಗಿದ್ದಾಗ ಈ ಘಟನೆ ನಡೆದಿತ್ತು. ಆಗ ತಾನು ಸಿಯಾನ ಬಿಜೆಪಿ ಮಂಡಲ ಕಾರ್ಯದರ್ಶಿಯಾಗಿದ್ದೆ, ಪ್ರತಿಭಟನೆಯನ್ನು ನೋಡುತ್ತಿದ್ದೆ. ಫೋಟೋಗಳಲ್ಲಿ, ವೀಡಿಯೋಗಳಲ್ಲಿ ತಾನು ಕಾಣಿಸಿಕೊಂಡಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ತನ್ನಂತೆಯೇ ಹಲವು ಗ್ರಾಮಸ್ಥರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆತ ಹೇಳಿದ್ದಾನೆ.
ಆ ಸಂದರ್ಭದಲ್ಲಿ ಆ ಘಟನೆಯ ಪ್ರಮುಖ ಆರೋಪಿ ಬಜರಂಗದಳ ಸಂಚಾಲಕ ಯೋಗೇಶ್ ರಾಜ್ ಎಂಬಾತನಿಗೆ ಅಹ್ಲಾವತ್ ಕರೆ ಮಾಡಿ ನಡೆದಿತ್ತೆನ್ನಲಾದ ಗೋಹತ್ಯೆ ವಿಚಾರದ ಮಾಹಿತಿ ನೀಡಿದ್ದ. ಇದರ ಬೆನ್ನಲ್ಲೇ ದೊಡ್ಡ ಗುಂಪೊಂದು ಅಲ್ಲಿ ಜಮಾಯಿಸಿ ಹಿಂಸೆಗೆ ತೊಡಗಿತ್ತು ಎನ್ನಲಾಗಿದೆ.
ಬುಲಂದ್ಶಹರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಕಾಸ್ ಚೌಹಾಣ್ ಕೂಡ ಅಹ್ಲಾವತ್ ನೇಮಕಾತಿಯನ್ನು ಸಮರ್ಥಿಸಿಕೊಂಡಿದ್ಧಾರೆ. ಆತ ಆ ಘಟನೆ ವೇಳೆ ಸ್ಥಳದಲ್ಲಿದ್ದರಷ್ಟೇ. ಅವರೇನು ಅಪರಾಧಿಯಲ್ಲ, ಬೇರೆ ಯಾವುದೇ ಪ್ರಕರಣ ಅವರ ಮೇಲಿಲ್ಲ ಎಂದಿದ್ದಾರೆ.