ಗುಜರಾತ್: ಬಂಧಿತ ಆರೋಪಿ ಕೋರ್ಟ್ ಆವರಣದಿಂದ ಪರಾರಿ
ಸಿಎಂಓ ಅಧಿಕಾರಿಯ ಸೋಗಿನಲ್ಲಿ ರೂಪದರ್ಶಿಯ ಅತ್ಯಾಚಾರದ ಆರೋಪಿ
Photo : ndtv - ಸಾಂದರ್ಭಿಕ ಚಿತ್ರ
ವಡೋದರಾ : ಗುಜರಾತ್ ಮುಖ್ಯಮಂತ್ರಿಯವರ ಕಾರ್ಯಾಲಯ(ಸಿಎಂಓ)ದ ಅಧಿಕಾರಿಯ ಸೋಗುಧರಿಸಿ ವಂಚನೆ ಹಾಗೂ ರೂಪದರ್ಶಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆಂದು ಗುಜರಾತ್ ಪೊಲೀಸರು ರವಿವಾರ ತಿಳಿಸಿದ್ದಾರೆ.
ವಿಜಯ್ ಪಟೇಲ್ ಪರಾರಿಯಾದ ಆರೋಪಿಯಾಗಿದ್ದು, ಆತನನ್ನು ಈ ವರ್ಷದ ಏಪ್ರಿಲ್ನಲ್ಲಿ ವಂಚನೆ, ಫೋರ್ಜರಿ, ಅತ್ಯಾಚಾರ ಹಾಗೂ ಸಾರ್ವಜನಿಕ ಹುದ್ದೆಯ ಅಧಿಕಾರಿಯೆಂಬ ಸೋಗುಧರಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು.
ಆರೋಪಿ ವಿಜಯ್, ವಡೋದರಾದ ಕೇಂದ್ರೀಯ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಆತ ಗುಜರಾತ್ ಇಂಟರ್ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಅಧ್ಯಕ್ಷ ಎಂಬುದಾಗಿಯೂ ಹೇಳಿಕೊಂಡು ವಂಚಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಆರೋಪಿ ವಿಜಯ್ ಪಟೇಲ್ ನನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಕರೆತಂದಿದ್ದ ಕಾನ್ಸ್ಟೇಬಲ್ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದನೆಂದು ಗೋತ್ರಿ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪಟೇಲ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 224 ಅನ್ವಯ ಹೊಸ ಎಫ್ಐಆರ್ ದಾಖಲಿಸಲಾಗಿದೆ. ಆತನ ಬಂಧನಕ್ಕೆ ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಏಪ್ರಿಲ್ ನಲ್ಲಿ ವಡೋದರಾ ನಗರದ ಮಲ್ಟಿಪ್ಲೆಕ್ಸ್ ಒಂದರಲ್ಲಿ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ ಹಿನ್ನೆಲೆಯಲ್ಲಿ ಪಟೇಲ್ ನನ್ನು ಬಂಧಿಸಲಾಗಿತ್ತು. ಆಗ ಆತನ ಗೆಳತಿ ಕೂಡಾ ಜೊತೆಗಿದ್ದಳು. ತಾನು ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ ಅಧಿಕಾರಿಯಾಗಿರುವುದಾಗಿ ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದನು.
ಆಗ ಪೊಲೀಸರು ಆತನ ಗುರುತಿನ ತಪಾಸಣೆ ನಡೆಸಿದಾಗ, ಆತ ತನ್ನ ಪ್ಯಾನ್ ಕಾರ್ಡ್ನಲ್ಲಿ ಬೇರೆಯೇ ಉಪನಾಮವನ್ನು ಬಳಸಿರುವುದು ಗಮನಕ್ಕೆ ಬಂದಿತ್ತು. ಆತ ಆಧಾರ್ ಕಾರ್ಡಿನಲ್ಲಿ ಉಪನಾಮವನ್ನು ಬಳಸಿಲ್ಲವೆಂಬುದು ತಿಳಿದುಬಂದಿತು. ಸಂಶಯಗೊಂಡ ಪೊಲೀಸರು ವಿಚಾರಣೆ ಮುಂದುವರಿಸಿದಾಗ ಆತ ಮುಖ್ಯಮಂತ್ರಿ ಅವರ ಕಾರ್ಯಾಲಯದ ಅಧಿಕಾರಿಯಲ್ಲ ಹಾಗೂ ಗಿಫ್ಟ್ ಸಿಟಿಯ ಅಧ್ಯಕ್ಷನೂ ಅಲ್ಲವೆಂದು ತಿಳಿದು ಬಂತು ಪೊಲೀಸರು ಹೇಳಿದ್ದಾರೆ.
ವಿಜಯ್ ನ ನೈಜ ಗುರುತು ಬೆಳಕಿಗೆ ಬಂದ ಬಳಿಕ, ಆತನ ಗೆಳತಿ, ಮುಂಬೈನ ರೂಪದರ್ಶಿ ಕೂಡಾ ಆತನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಳು. ತನಗೆ ಗಿಫ್ಟ್ ಸಿಟಿಯ ಪ್ರಚಾರರಾಯಭಾರಿಯಾಗಿ ನೇಮಿಸುವ ಆಮಿಷವೊಡ್ಡಿ ವಿಜಯ್ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ತನ್ನನ್ನು ವಿವಾಹವಾಗುವುದಾಗಿಯೂ ವಂಚಿಸಿದ್ದನೆಂದು ರೂಪದರ್ಶಿ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.