ದೆಹಲಿ ವಿವಿ ಕ್ಯಾಂಪಸ್ ಬಳಿ ಗೋಮಾಂಸ ಮಾರಾಟ ಶಂಕೆಯಿಂದ ವ್ಯಕ್ತಿಗೆ ಥಳಿತ

ಸಾಂದರ್ಭಿಕ ಚಿತ್ರ PC: PTI
ದೆಹಲಿ ವಿವಿ ಕ್ಯಾಂಪಸ್ ಬಳಿ ಗೋಮಾಂಸ ಮಾರಾಟ ಶಂಕೆಯಿಂದ ವ್ಯಕ್ತಿಗೆ ಥಳಿತ
ಹೊಸದಿಲ್ಲಿ: ವಾಯವ್ಯ ದೆಹಲಿಯ ವಿಜಯನಗರ ಪ್ರದೇಶದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಶಂಕೆಯಿಂದ ಕಿರಾಣಿ ಅಂಗಡಿಯ ಮಾಲೀಕರೊಬ್ಬರನ್ನು ಉದ್ರಿಕ್ತರ ಗುಂಪು ಅಮಾನುಷವಾಗಿ ಥಳಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ದೆಹಲಿ ವಿಶ್ವವಿದ್ಯಾನಿಲಯದ ನಾರ್ತ್ ಕ್ಯಾಂಪಸ್ ಬಳಿ ಈ ಘಟನೆ ನಡೆದಿದೆ.
ಈ ಪ್ರದೇಶದ್ದು ಎನ್ನಲಾದ ವಿಡಿಯೊದಲ್ಲಿ "ಗೋವಧೆ ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕು" ಎಂಬ ಘೋಷಣೆ ಕೂಗುತ್ತಿರುವುದು ಕೇಳಿಬರುತ್ತಿದೆ. ಪರಿಸ್ಥಿತಿ ನಿಭಾಯಿಸುವ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾರಾಟ ಮಾಡುತ್ತಿದ್ದುದು ಗೋಮಾಂಸವೇ ಎಂದು ನಿರ್ಧರಿಸಲು ಮಾಂಸದ ಮಾದರಿಯನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಸುಮಾರು 44 ವರ್ಷ ವಯಸ್ಸಿನ ಕಿರಾಣಿ ಅಂಗಡಿ ಮಾಲೀಕನನ್ನು ಚಮನ್ ಕುಮಾರ್ ಎಂದು ಗುರುತಿಸಲಾಗಿದ್ದು, ರಾತ್ರಿ 9 ರಿಂದ 10 ಗಂಟೆಯ ನಡುವೆ ಈ ಹಲ್ಲೆ ನಡೆದಿದೆ. ಈ ಪ್ರದೇಶದ 15 ವರ್ಷದ ಬಾಲಕನೊಬ್ಬ ದೂರು ನೀಡಿದ್ದಾಗಿ ಡಿಸಿಪಿ ಭೀಷ್ಮ ಸಿಂಗ್ ಸ್ಪಷ್ಟಪಡಿಸಿದ್ದಾರೆ.
"ಗೋಮಾಂಸ ಮಾರಾಟ ಮಾಡುತ್ತಿದ್ದ ಶಂಕೆಯಿಂದ ಸಾರ್ವಜನಿಕರ ಒಂದು ಗುಂಪು ಅಂಗಡಿ ಮಾಲೀಕನನ್ನು ಥಳಿಸಿದೆ. ಸಂತ್ರಸ್ತ ವ್ಯಕ್ತಿಗೆ ವೈದ್ಯಕೀಯ ನೆರವು ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡಲಾಗಿದೆ" ಎಂದು ಸಿಂಗ್ ಹೇಳಿದ್ದಾರೆ. ಈ ಅಂಗಡಿಯಿಂದ 400 ರೂಪಾಯಿಗೆ ಒಂದು ಕೆ.ಜಿ ಗೋಮಾಂಸ ಖರೀದಿಸಿದ್ದಾಗಿ ದೂರುದಾರರು ಹೇಳಿದ್ದಾಗಿ ಸಿಂಗ್ ವಿವರಿಸಿದರು.
ಎಸ್ಎಫ್ಐ ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಭಾಗದ ಸಿಸಿ ಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಲಾಗಿದ್ದು, ಘಟನಾವಳಿಯನ್ನು ದೃಢಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.







