ನಾಗ್ಪುರ| ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನು ಬೈಕ್ನಲ್ಲಿ ಸಾಗಿಸಿದ ಪತಿ; ವೀಡಿಯೊ ವೈರಲ್

Photo credit: indiatoday.in
ನಾಗ್ಪುರ: ನಾಗ್ಪುರ–ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನು, ಪತಿ ಬೈಕ್ನಲ್ಲಿ ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಮಹಿಳೆಯನ್ನು ಗ್ಯಾರಸಿ ಯಾದವ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಮಿತ್ ಭುರಾ ಯಾದವ್ (35) ನೀಡಿದ ಮಾಹಿತಿಯಂತೆ, ವೇಗವಾಗಿ ಬಂದ ಟ್ರಕ್ ಅವರ ಬೈಕ್ಗೆ ಢಿಕ್ಕಿ ಹೊಡೆದು, ಪತ್ನಿ ಟ್ರಕ್ನ ಚಕ್ರಗಳ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
"ಆಸ್ಪತ್ರೆಗೆ ಕರೆದೊಯ್ಯಲು ಹಾದುಹೋಗುತ್ತಿದ್ದ ವಾಹನ ಚಾಲಕರಲ್ಲಿ ಕೈ ಜೋಡಿಸಿ ಬೇಡಿಕೊಂಡೆ. ಆದರೆ ಯಾರೂ ನಿಲ್ಲಿಸಲಿಲ್ಲ," ಎಂದು ಅಮಿತ್ ಪೊಲೀಸರಿಗೆ ತಿಳಿಸಿದ್ದಾರೆ.
ಮೂಲತಃ ಮಧ್ಯಪ್ರದೇಶದ ಸಿಯೋನಿ ಮೂಲದ ಈ ದಂಪತಿ ಕಳೆದ 10 ವರ್ಷಗಳಿಂದ ನಾಗ್ಪುರದಲ್ಲಿ ವಾಸಿಸುತ್ತಿದ್ದರು. ರಕ್ಷಾ ಬಂಧನಕ್ಕಾಗಿ ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಯಾರಿಂದಲೂ ಸಹಾಯ ಸಿಗದ ಹಿನ್ನೆಲೆಯಲ್ಲಿ, ಅಮಿತ್ ಮೃತದೇಹವನ್ನು ಬೈಕ್ಗೆ ಕಟ್ಟಿಕೊಂಡು ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದರು. ಈ ವೇಳೆ ಹಿಂಬಾಲಿಸುತ್ತಿದ್ದ ಕಾರಿನಿಂದ ಘಟನೆಯ ವೀಡಿಯೊ ಚಿತ್ರೀಕರಿಸಲಾಗಿದ್ದು, ಹಿಂಬದಿ ಸೀಟಿನಲ್ಲಿ ಮೃತದೇಹ ಅಡ್ಡಲಾಗಿ ಮಲಗಿರುವುದು ಹಾಗೂ ಕಾರಿನಲ್ಲಿದ್ದವರು ನಿಲ್ಲುವಂತೆ ವಿನಂತಿಸುತ್ತಿರುವ ದೃಶ್ಯ ದಾಖಲಾಗಿದೆ. ಆದರೆ ಅಮಿತ್ ಭಯದಿಂದ ನಿಲ್ಲಿಸದೇ ಸಾಗಿದ್ದಾರೆ.
ಅಂತಿಮವಾಗಿ ಹೆದ್ದಾರಿ ಪೊಲೀಸರು ಬೈಕ್ ಅನ್ನು ತಡೆದು ಮೃತದೇಹವನ್ನು ವಶಕ್ಕೆ ಪಡೆದು ನಾಗ್ಪುರದ ಮೇಯೊ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.







