ಉತ್ತರ ಪ್ರದೇಶ | ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ 10 ಕಿ.ಮೀ ವ್ಯಾಪ್ತಿಯಲ್ಲಿ ಎಸೆದ ಪತಿ!

Photo credit: NDTV
ಲಕ್ನೋ: ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಶ್ರಾವಸ್ತಿ ಪ್ರದೇಶದ ಹಲವೆಡೆ ಎಸೆದು ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ.
ಸೈಫುದ್ದೀನ್ ಎಂಬಾತ ಪತ್ನಿ ಸಬೀನಾಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಕೆಲವು ಭಾಗಗಳನ್ನು ಕಾಲುವೆಗೆ ಎಸೆದಿದ್ದಾನೆ. ಇನ್ನು ಕೆಲವು ಭಾಗಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಶ್ರಾವಸ್ತಿ ಪ್ರದೇಶದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಸೆದಿದ್ದಾನೆ.
ಪ್ರಕರಣ ಬಯಲಾಗಿದ್ದೇಗೆ?
ಮೇ 14ರಂದು ಸಬೀನಾ ಸಹೋದರ ಸಲಾವುದ್ದೀನ್ ಆಕೆಗೆ ಕರೆ ಮಾಡಿದ್ದಾನೆ. ಆದರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಅದೇ ದಿನ, ಸಲಾವುದ್ದೀನ್ ಆಕೆಯ ಮನೆಗೆ ಹೋದಾಗ ದಂಪತಿ ಲಕ್ನೋಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಸಂಜೆ ಆರೋಪಿ ಆ ಪ್ರದೇಶದಲ್ಲಿ ಓಡಾಡುತ್ತಿರುವುದನ್ನು ಸಲಾವುದ್ದೀನ್ ಗಮನಿಸಿದ್ದಾನೆ. ಆದರೆ ಅವನ ಸಹೋದರಿ ಬಗ್ಗೆ ಸುಳಿವೇ ಇರಲಿಲ್ಲ. ಇದರಿಂದಾಗಿ ಸಹೋದರಿ ನಾಪತ್ತೆಯಾಗಿದ್ದಾಳೆಂದು ಸಲಾವುದ್ದೀನ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದರು. ಪೊಲೀಸರು ಸೈಫುದ್ದೀನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಯ ಬಳಿಕ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಎಸೆದಿರವುದಲ್ಲದೆ ಕೈಯನ್ನು ಸುಟ್ಟು ಹತ್ತಿರದ ತೋಟದಲ್ಲಿ ಬಚ್ಚಿಟ್ಟಿದ್ದಾಗಿಯೂ ಒಪ್ಪಿಕೊಂಡಿದ್ದಾನೆ. ಸಂತ್ರಸ್ತೆಯ ಕೈಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ʼಸಬೀನಾಗೆ ಆಕೆಯ ಪತಿ ಮತ್ತು ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಸಬೀನಾಳ ಕೊಲೆ ನಡೆದಿದೆʼ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.







