ನಾಗ್ಪುರ | ಫಾರ್ಮ್ಹೌಸ್ನಲ್ಲಿ ಹುಟ್ಟುಹಬ್ಬದ ಪಾರ್ಟಿ; ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಸಾಂಧರ್ಭಿಕ ಚಿತ್ರ | Photo : Deccan Herald
ನಾಗ್ಪುರ: ನಾಗ್ಪುರ ನಗರದ ವಾಥೋಡಾ ಪ್ರದೇಶದ ಫಾರ್ಮ್ಹೌಸ್ನಲ್ಲಿ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭದಲ್ಲಿ 22 ವರ್ಷದ ಯುವಕ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತರನ್ನು ಪ್ರಾಂಜಲ್ ನಿತಿನ್ ರಾವ್ಲೆ ಎಂದು ಗುರುತಿಸಲಾಗಿದೆ.
ಪಂಧುರ್ನಾ ಗ್ರಾಮದ ಫಾರ್ಮ್ಹೌಸ್ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಲ್ಲಿ ಅವರು ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು ಎನ್ನಲಾಗಿದೆ.
ಈಜು ಬಾರದ ಪ್ರಾಂಜಲ್ ಕೊಳಕ್ಕೆ ಹಾರಿ ಆಳವಾದ ನೀರಿನಲ್ಲಿ ಒದ್ದಾಡಲು ಪ್ರಾರಂಭಿಸಿದರು. ಸ್ನೇಹಿತರು ಆರಂಭದಲ್ಲಿ ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದರು. ಆದರೆ ನೋಡು ನೋಡುತ್ತಿದ್ದಂತೆ ಪ್ರಾಂಜಲ್ ನೀರಿನಲ್ಲಿ ಮುಳುಗಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಬಳಿಕ ನೀರಿನಿಂದ ಹೊರತೆಗೆದರು ಎಂದು ವಾಥೋಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾರಂಜಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





