ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕ ವಿದ್ಯುತ್ ಆಘಾತದಿಂದ ಮೃತ್ಯು
ಜಿಮ್ ಮಾಲಕನ ಬಂಧನ

ಸಾಕ್ಷಮ್ ಪೃಥಿ (Photo: NDTV)
ಹೊಸದಿಲ್ಲಿ: ದಿಲ್ಲಿಯ ಜಿಮ್ ಒಂದರಲ್ಲಿ ಟ್ರೆಡ್ಮಿಲ್ ಓಡುತ್ತಿದ್ದ ಯುವಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದು, ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಪೊಲೀಸರು ಜಿಮ್ ಮಾಲಕನನ್ನು ಬಂಧಿಸಿದ್ದಾರೆ.
ಮೃತ ಯುವಕನನ್ನು 24 ವರ್ಷದ ಸಾಕ್ಷಮ್ ಪೃಥಿ ಎಂದು ಗುರುತಿಸಲಾಗಿದ್ದು, ಬಿಟೆಕ್ ಪದವೀಧರರಾಗಿರುವ ಯುವಕ ಗುರುಗ್ರಾಮ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಜಿಮ್ನಲ್ಲಿ ಟ್ರೆಡ್ಮಿಲ್ನಲ್ಲಿ ಓಡುತ್ತಿದ್ದಾಗ ಈ ಘಟನೆ ನಡೆದಿದೆ. ಓಡಿದ ಬಳಿಕ ವಿಶ್ರಾಂತಿಗೆಂದು ಸಾಕ್ಷಮ್ ಕುಳಿತಿದ್ದು, ತಕ್ಷಣವೇ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿನ ವೈದ್ಯರು ಈಗಾಗಲೇ ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ವಿದ್ಯುತ್ ಆಘಾತ ಕಾರಣ ಎಂದು ಪೊಲೀಸರು ದೃಢಪಡಿಸಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಜಿಮ್ ಮಾಲಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಯುವಕನ ತಾಯಿ ಹೇಳಿದ್ದಾರೆ. ಪೊಲೀಸರು ಜಿಮ್ ಮಾಲಕನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.





