ʼಹೋಂವರ್ಕ್ʼ ಮಾಡಿಲ್ಲ ಎಂದು ಪುತ್ರಿಯನ್ನೇ ಹತ್ಯೆಗೈದ ತಂದೆ!

Photo credit: indiatoday.in
ಫರೀದಾಬಾದ್: ಹೋಂವರ್ಕ್ ಮಾಡದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ನಾಲ್ಕು ವರ್ಷದ ಪುತ್ರಿಯನ್ನೇ ಥಳಿಸಿ ಹತ್ಯೆಗೈದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರೋಪಿಯ ಪತ್ನಿ ನೀಡಿದ ದೂರನ್ನು ಆಧರಿಸಿ, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೃಷ್ಣ ಜೈಸ್ವಾಲ್ (31) ಎಂದು ಗುರುತಿಸಲಾಗಿದೆ.
ದೈನಂದಿನ ಮನೆಪಾಠದಲ್ಲಿ ತನ್ನ ಪುತ್ರಿಯು 50ರ ಸಂಖ್ಯೆಯವರೆಗೆ ಬರೆಯಲು ವಿಫಲವಾಗಿದ್ದರಿಂದ ಕುಪಿತಗೊಂಡಿರುವ ಆರೋಪಿ ಕೃಷ್ಣ ಜೈಸ್ವಾಲ್ ಆಕೆಯನ್ನು ಮನ ಬಂದಂತೆ ಥಳಿಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬಳಿಕ, ಈ ಕುರಿತು ಬಾಲಕಿಯ ತಾಯಿ ನೀಡಿದ ದೂರನ್ನು ಆಧರಿಸಿ ಸೆಕ್ಟರ್ 58 ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ನಗರ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ಖೇರಾಟಿಯಾ ಗ್ರಾಮದ ನಿವಾಸಿಯಾದ ಕೃಷ್ಣ ಜೈಸ್ವಾಲ್, ಫರೀದಾಬಾದ್ ನ ಬಾಡಿಗೆ ಮನೆಯೊಂದರಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ಕೃಷ್ಣ ಜೈಸ್ವಾಲ್ ಹಾಗೂ ಆತನ ಪತ್ನಿಯಿಬ್ಬರೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯು ಉದ್ಯೋಗಕ್ಕೆ ತೆರಳಿದಾಗ, ಬೆಳಗ್ಗೆ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಕೃಷ್ಣ ಜೈಸ್ವಾಲ್, ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಹಾಗೂ ತನ್ನ ಪುತ್ರಿಯ ವ್ಯಾಸಂಗದ ಮೇಲೆ ನಿಗಾ ವಹಿಸುತ್ತಿದ್ದ ಎನ್ನಲಾಗಿದೆ.
ಜನವರಿ 21ರಂದು ಈ ಘಟನೆ ನಡೆದಿದ್ದು, ಕೃಷ್ಣ ಜೈಸ್ವಾಲ್ ತನ್ನ ಪುತ್ರಿಗೆ ಒಂದರಿಂದ 50ರವರೆಗೆ ಅಂಕಿಗಳನ್ನು ಬರೆಯುವಂತೆ ಸೂಚಿಸಿದ್ದಾನೆ. ಆದರೆ, ಬಾಲಕಿಗೆ ಬರೆಯಲು ಸಾಧ್ಯವಾಗದಿದ್ದಾಗ ಕೋಪಗೊಂಡ ಆತ, ಪುತ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಪತ್ನಿಯು ಸಂಜೆ ಮನೆಗೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮನೆಯಲ್ಲಿ ಬಾಲಕಿಯು ಮೃತ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಕೃಷ್ಣ ಜೈಸ್ವಾಲ್ ಪತ್ನಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
“ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆಗಾಗಿ ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ” ಎಂದು ಫರೀದಾಬಾದ್ ಪೊಲೀಸರೊಬ್ಬರು ತಿಳಿಸಿದ್ದಾರೆ.







