ಹೆಂಡತಿಯನ್ನು ಕೊಂದು, ಮಗನನ್ನು ಕೂಡಿ ಹಾಕಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
Photo credit: NDTV
ಗುರುಗ್ರಾಮ: ವ್ಯಕ್ತಿಯೊಬ್ಬ ತನ್ನ 23 ವರ್ಷದ ಪತ್ನಿಯನ್ನು ಕೊಂದು, ಪತ್ನಿಯ ಮೃತದೇಹದೊಂದಿಗೆ ಎರಡು ವರ್ಷದ ಮಗನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಗಾಝಿಯಾಬಾದ್ನ ಮೆಟ್ರೋ ನಿಲ್ದಾಣದಿಂದ ಜಿಗಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರವ್ ಶರ್ಮಾ (30) ತನ್ನ ಪತ್ನಿ ಲಕ್ಷ್ಮಿಯ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಿ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಆತ ತನ್ನ ಮಗನಿಗೂ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ಬಳಿಕ ಘಟನಾ ಸ್ಥಳದಿಂದ ಪರಾರಿಯಾದ ಆತ ಗಾಜಿಯಾಬಾದ್ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಕೂಗಿನಿಂದ ಎಚ್ಚೆತ್ತ ನೆರೆಹೊರೆಯವರು ಮನೆಗೆ ಬೀಗ ಹಾಕಿರುವುದನ್ನು ಕಂಡು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಬಾಗಿಲು ಒಡೆದು ನೋಡಿದಾಗ ಮಹಿಳೆಯ ಮೃತದೇಹ ಹಾಗೂ ಗಾಯಗೊಂಡ ಮಗು ಮೃತದೇಹದ ಬಳಿ ಅಳುತ್ತಿರುವುದು ಕಂಡು ಬಂದಿದೆ.
ಮೃತ ಮಹಿಳೆಯ ಮೊಬೈಲ್ ಫೋನ್ ಶೌಚಾಲಯದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಆತ್ಮಹತ್ಯೆ ಮಾಡಿಕೊಂಡ ಗೌರವ್ ಶರ್ಮಾ ತನ್ನ ಪತ್ನಿ ಲಕ್ಷ್ಮಿಯನ್ನು ಕೊಂದಿದ್ದಾನೆ ಎಂದು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಸೂಚಿಸುತ್ತವೆ. ನಾವು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದೇವೆ" ಎಂದು ಡಿಎಲ್ಎಫ್ ಹಂತ -3 ಪೊಲೀಸ್ ಠಾಣೆ ಎಸ್ಎಚ್ಒ ದಿನಕರ್ ಹೇಳಿದ್ದಾರೆ.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಮೃತರಿಬ್ಬರು ಉತ್ತರ ಪ್ರದೇಶದ ಆಗ್ರಾ ಮೂಲದವರಾಗಿದ್ದು, ಮೂರು ವರ್ಷಗಳ ಹಿಂದೆ ಅವರು ವಿವಾಹವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರ್ಮಾ ಇತ್ತೀಚೆಗೆ ನಿರುದ್ಯೋಗಿಯಾಗಿದ್ದ.