ಸೀಟ್ ಗಾಗಿ ವಾಗ್ವಾದ: ಗುಂಡುಹಾರಿಸಿದ ಪ್ರಯಾಣಿಕನ ಬಂಧನ

Photo: Pexels
ಹೊಸದಿಲ್ಲಿ : ರೈಲಿನಲ್ಲಿ ಆಸನಕ್ಕಾಗಿ ಕೋಚ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕನೊಬ್ಬ ಗುಂಡು ಹಾರಾಟ ನಡೆಸಿದ ಘಟನೆ ಸಿಲ್ಡಾ-ಹೊಸದಿಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ರೈಲ್ವೆ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಗುಂಡು ಹಾರಾಟ ನಡೆಸಿದ ವ್ಯಕ್ತಿಯು ನಿವೃತ್ತ ಸೈನಿನಾಗಿದ್ದು, ಆತನನ್ನು ಬಂಧಿಸಲಾಗಿದೆ. ಪೂರ್ವಕೇಂದ್ರ ರೈಲ್ವೆ ವಲಯದ ಧನಾಬಾದ್ ಹಾಗೂ ಗೊಮೊಹ್ ನಿಲ್ದಾಣದಲ್ಲಿರುವ ಬಿ-7 ಬೋಗಿಯಲ್ಲಿ ಈ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಹರವಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಆತ ಗುಂಡು ಹಾರಾಟ ನಡೆಸಿದ ವೇಳೆ ಪಾನಮತ್ತನಾಗಿದ್ದನೆಂದು ಮೇಲ್ನೋಟದ ತನಿಖೆಯಿಂದ ತಿಳಿದುಬಂದಿರುವುದಾಗಿ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ (ಧನಾಬಾದ್ ರೈಲು ವಿಭಾಗ) ಆಮರೇಶ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಸಿಂಗ್ ಹೌರಾ-ಹೊಸದಿಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಟಿಕೆಟ್ ಖರೀದಿಸಿದ್ದನು. ಆದರೆ ಆತ ತಪ್ಪಾಗಿ ಗುರುವಾರ ಸಂಜೆ ಸೆಲ್ದಾ- ಹೊಸದಿಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದನೆಂದು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲನ್ನೇರಿದ ಬಳಿಕ ಆತ ಕೋಚ್ ಸಿಬ್ಬಂದಿಯೊಂದಿಗೆ ಸೀಟಿಗಾಗಿ ಜಗಳವಾಡಿದ್ದನೆನ್ನಲಾಗಿದೆ. ಈ ವಾಗ್ವಾದದ ನಡುವೆ ಆತ ತನ್ನಲ್ಲಿದ್ದ ರಿವಾಲ್ವರ್ ನಿಂದ ಗುಂಡುಹಾರಿಸಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಧಾವಿಸಿದ ಆರ್ ಪಿ ಎಫ್ ಸಿಬ್ಬಂದಿ, ಆತನಿಂದ ಪಿಸ್ತೂಲ್ ಕಸಿದುಕೊಂಡರು ಹಾಗೂ ಕೊಡೆರ್ಮಾ ರೈಲುನಿಲ್ದಾಣದಲ್ಲಿ ಆತನನ್ನು ವಶಕ್ಕೆತೆಗೆದುಕೊಳ್ಳಲಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.







