ಅಮೆರಿಕ ಕ್ರಿಪ್ಟೊಕರೆನ್ಸಿ ಹಗರಣದಲ್ಲಿ ಬೇಕಿದ್ದ ಲಿಥುವೇನಿಯ ಪ್ರಜೆ ಕೇರಳದಲ್ಲಿ ಬಂಧನ
96 ಶತಕೋಟಿ ಡಾಲರ್ ಮೌಲ್ಯದ ಕ್ರಿಪ್ಟೊಕರೆನ್ಸಿ ಅವ್ಯವಹಾರ ನಡೆಸಿದ್ದ ಬೆಸಿಯೊಕೋವ್

ಅಲೆಕ್ಸೇಜ್ ಬೆಸಿಯೊಕೋವ್ (Photo:X)
ತಿರುವನಂತಪುರಂ: ಅಮೆರಿಕದ ಬೃಹತ್ ಕ್ರಿಪ್ಟೊಕರೆನ್ಸಿ ಹಗರಣದಲ್ಲಿ ಬೇಕಿರುವ ಲಿಥುವೇನಿಯ ಪ್ರಜೆಯೊಬ್ಬನನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಅಲೆಕ್ಸೇಜ್ ಬೆಸಿಯೊಕೋವ್ ಎಂದು ಗುರುತಿಸಲಾಗಿದ್ದು, ರ್ಯಾನ್ಸಮ್ ವೇರ್, ಕಂಪ್ಯೂಟರ್ ಹ್ಯಾಕಿಂಗ್ ಹಾಗೂ ಮಾದಕ ದ್ರವ್ಯ ಕಳ್ಳ ಸಾಗಣೆಯಂಥ ಕ್ರಿಮಿನಲ್ ಚಟುವಟಿಕೆಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸಲು ‘ಗ್ಯಾರಂಟೆಕ್ಸ್’ ಎಂಬ ಕ್ರಿಪ್ಟೊಕರೆನ್ಸಿ ವಿನಿಮಯವನ್ನು ಆತ ಸ್ಥಾಪಿಸಿದ್ದ ಎನ್ನಲಾಗಿದೆ.
ಬೆಸಿಯೊಕೋವ್ ಭಾರತದಿಂದ ಪರಾರಿಯಾಗುವ ಯೋಜನೆ ರೂಪಿಸುತ್ತಿದ್ದಾಗ, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದ ಗುಪ್ತಚರ ದಾಖಲೆಗಳ ಪ್ರಕಾರ, ಕ್ರಿಮಿನಲ್ ವಹಿವಾಟು ಸಂಸ್ಥೆಗಳು (ಭಯೋತ್ಪಾದಕ ಸಂಘಟನೆಗಳು ಸೇರಿದಂತೆ) ನಡೆಸುತ್ತಿದ್ದ ಕ್ರಿಪ್ಟೊಕರೆನ್ಸಿ ವಹಿವಾಟಿಗೆ ಕನಿಷ್ಠ ಪಕ್ಷ 96 ಶತಕೋಟಿ ಡಾಲರ್ ಮೊತ್ತವನ್ನು ಅಕ್ರಮವಾಗಿ ವರ್ಗಾಯಿಸಲು ನೆರವು ನೀಡಿದ್ದ ಗ್ಯಾರಾಟೆಕ್ಸ್ ಕ್ರಿಪ್ಟೊಕರೆನ್ಸಿ ವಿನಿಮಯವನ್ನು ಬೆಸಿಯೊಕೋವ್ ಸುಮಾರು ಆರು ವರ್ಷಗಳ ಕಾಲ ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಕಾರ್ಯಾಚರಿಸಿದ್ದ ಎನ್ನಲಾಗಿದೆ. ಇದರೊಂದಿಗೆ, ತನ್ನ ವಿರುದ್ಧ ಜಾರಿಯಾಗಿದ್ದ ಬಂಧನದ ವಾರೆಂಟ್ ಅನ್ನೂ ಉಲ್ಲಂಘಿಸಿದ್ದ ಎನ್ನಲಾಗಿದೆ.
“ಕ್ರಿಮಿನಲ್ ಮಾರ್ಗಗಳ ಮೂಲಕ ಗ್ಯಾರಾಟೆಕ್ಸ್ ಕೋಟ್ಯಂತರ ಮೊತ್ತವನ್ನು ಸ್ವೀಕರಿಸಿತ್ತು ಹಾಗೂ ಅದನ್ನು ಹ್ಯಾಕಿಂಗ್, ರ್ಯಾನ್ಸಮ್ ವೇರ್, ಭಯೋತ್ಪಾದನೆ ಹಾಗೂ ಮಾದಕ ದ್ರವ್ಯ ಕಳ್ಳಸಾಗಣೆಯಂಥ ವಿವಿಧ ಕ್ರಿಮಿನಲ್ ಕೃತ್ಯಗಳಿಗೆ ನೆರವು ನೀಡಲು ಬಳಸಲಾಗಿತ್ತು” ಎಂದು ಅಮೆರಿಕ ಹೇಳಿದೆ.
ಎಪ್ರಿಲ್ 2022ರಲ್ಲಿ ಬೆಸಿಯೊಕೋವ್ ವಿರುದ್ಧ ಅಮೆರಿಕ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಈ ವಾರದ ಆರಂಭದಲ್ಲಿ ಅಮೆರಿಕ ಅಧಿಕಾರಿಗಳ ಮನವಿಯ ಮೇರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಮೆರಿಕದ ತಾತ್ಕಾಲಿಕ ಬಂಧನದ ವಾರೆಂಟ್ ಅನ್ನು ಸ್ವೀಕರಿಸಿತ್ತು. ಇದರ ಬೆನ್ನಿಗೇ, ಸಿಬಿಐ ಹಾಗೂ ಕೇರಳ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಸಿಯೊಕೋವ್ ನನ್ನು ಕೇರಳದ ತಿರುವನಂತಪುರಂನಿಂದ ಬಂಧಿಸಲಾಗಿದೆ.
ಬೆಸಿಯೊಕೋವ್ ನನ್ನು ಶೀಘ್ರವೇ ಪಟಿಯಾಲ ಹೌಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.