ದಿಲ್ಲಿಯಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆ ಪ್ರಕರಣಕ್ಕೆ ತಿರುವು: ದೂರದಾರ ಪುತ್ರನ ಬಂಧನ

ರಾಜೇಶ್, ಪತ್ನಿ ಕೋಮಲ್ ಮತ್ತು ಮಗಳು ಕವಿತಾ (Photo credit: NDTV)
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ನಡೆದ ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣ ಸ್ಫೋಟಕ ತಿರುವು ಪಡೆದಿದ್ದು, ಕೊಲೆ ಪ್ರಕರಣದ ದೂರುದಾರನಾದ ಪುತ್ರನನ್ನೇ ʼತಂದೆ, ತಾಯಿ ಮತ್ತು ಸಹೋದರಿʼಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ
ದಿಲ್ಲಿಯ ನೆಬ್ ಸರೈ ಪ್ರದೇಶದಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ರಾಜೇಶ್(53), ಪತ್ನಿ ಕೋಮಲ್(47) ಮತ್ತು ಮಗಳು ಕವಿತಾ(23) ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ರಾಜೇಶ್ ಪುತ್ರ ಅರ್ಜುನ್(20)ನನ್ನು ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಬೆಳಗಿನ ಜಾವ ವಾಕಿಂಗ್ ಮುಗಿಸಿ ಹಿಂತಿರುಗುವಾಗ ತಮ್ಮ ಕುಟುಂಬದ ಸದಸ್ಯರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡಿರುವುದಾಗಿ ಅರ್ಜುನ್ ಪೊಲೀಸರಿಗೆ ದೂರು ನೀಡಿದ್ದ. ಆದರೆ ಇದೀಗ ತನಿಖೆಯ ವೇಳೆ ಆತನೇ ಕೃತ್ಯ ನಡೆಸಿ ಬಳಿಕ ನಾಟಕವಾಡಿದ್ದ ಎನ್ನುವುದು ಬಯಲಾಗಿದೆ.
ʼಅಪ್ಪ- ಅಮ್ಮ ನನಗಿಂತ ಹೆಚ್ಚು ಸಹೋದರಿ ಕವಿತಾಳನ್ನು ಇಷ್ಟ ಪಡುತ್ತಾರೆʼ ಎಂದು ಅರ್ಜುನ್ ತನ್ನ ಪೋಷಕರ ಜೊತೆ ವೈಮನಸ್ಸನ್ನು ಹೊಂದಿದ್ದ. ತಂದೆ ತನ್ನ ಆಸ್ತಿಯನ್ನು ಸಹೋದರಿ ಕವಿತಾಗೆ ವರ್ಗಾಯಿಸುತ್ತಾರೆ ಎಂದು ಕೋಪಗೊಂಡು ಕೊಲೆ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ದಕ್ಷಿಣ ವಲಯದ ಜಂಟಿ ಪೊಲೀಸ್ ಕಮಿಷನರ್ ಎಸ್ ಕೆ ಜೈನ್, ನಾವು ಅರ್ಜುನ್ ನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅರ್ಜುನ್ ಹೇಳಿಕೆಯಿಂದ ಅನುಮಾನ ಮೂಡಿತ್ತು. ಅರ್ಜುನ್ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಯತ್ನಿಸಿದ್ದಾನೆ. ಆದರೆ ನಿರಂತರ ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತಂದೆ-ತಾಯಿ ನನಗಿಂತ ಹೆಚ್ಚಾಗಿ ಸಹೋದರಿಯನ್ನು ಇಷ್ಟಪಡುತ್ತಿದ್ದರು ಎಂದು ಹೆತ್ತವರೊಂದಿಗೆ ವೈಮನಸ್ಸಿನಿಂದ ಕೃತ್ಯ ನಡೆಸಿರುವುದಾಗಿ ತಿಳಿಸಿದ್ದಾನೆ ಎಂದು ಹೇಳಿದ್ದಾರೆ.







