ಮತ್ತೆ ಮುನ್ನೆಲೆಗೆ ಬಂದ 2011ರ ಸೌಮ್ಯ ಪ್ರಕರಣ | ಕಣ್ಣೂರು ಜೈಲಿನಿಂದ ತಪ್ಪಿಸಿಕೊಂಡಿದ್ದ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿ!
ಪ್ರಕರಣದ ಬಗ್ಗೆ ಇಲ್ಲಿದೆ ಮಾಹಿತಿ…

PC : NDTV
ತಿರುವನಂತಪುರ: ಸೌಮ್ಯಾ ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ ಅಲಿಯಾಸ್ ಚಾರ್ಲಿ ಥಾಮಸ್ ಬಿಗಿ ಭದ್ರತೆಯ ಕಣ್ಣೂರು ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, 2011ರ ಘೋರ ಅಪರಾಧವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ, ಒಂದೇ ತೋಳು ಹೊಂದಿರುವ ಗೋವಿಂದಚಾಮಿ ಶುಕ್ರವಾರ ನಸುಕಿನಲ್ಲಿ ಜೈಲಿನಿಂದ ನಾಪತ್ತೆಯಾಗಿದ್ದ.
ಗೋವಿಂದಚಾಮಿಯ ಸೆಲ್ ನ ದೈನಂದಿನ ತಪಾಸಣೆ ವೇಳೆ ಆತ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿತ್ತು. ಅಧಿಕಾರಿಗಳು ತಕ್ಷಣವೇ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಕೆಲವೇ ಗಂಟೆಗಳಲ್ಲಿ ಆತ ಕಣ್ಣೂರಿನಲ್ಲಿ ಪತ್ತೆಯಾಗಿದ್ದಾನೆ. ಪೋಲಿಸರನ್ನು ಕಂಡು ಗೋವಿಂದಚಾಮಿ ಬಾವಿಯೊಂದರಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ್ದನಾದರೂ ಸಿಕ್ಕಿ ಬಿದ್ದು ಮರಳಿ ಜೈಲು ಸೇರಿದ್ದಾನೆ.
ಈ ಪರಾರಿ ಯತ್ನ ಕೇರಳದ ಅತ್ಯಂತ ಸುಭದ್ರ ಜೈಲುಗಳಲ್ಲೊಂದಾಗಿರುವ ಕಣ್ಣೂರು ಜೈಲಿನಲ್ಲಿ ಭದ್ರತಾ ಲೋಪಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಾರ ಗಮನಕ್ಕೂ ಬಾರದೆ ಆತ ತಪ್ಪಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
►ಸೌಮ್ಯಾ ಕೊಲೆ ಪ್ರಕರಣ:
ಪ್ರಕರಣವು 2011,ಫೆ.1ರಷ್ಟು ಹಳೆಯದಾಗಿದೆ. ಕೊಚ್ಚಿಯ ಶಾಪಿಂಗ್ ಮಾಲ್ ವೊಂದರಲ್ಲಿ ಮಾರಾಟ ವಿಭಾಗದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯಾ(23) ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಎರ್ನಾಕುಲಮ್ ನಿಂದ ಶೋರ್ನೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬೋಗಿಗೆ ನುಗ್ಗಿದ್ದ ಗೋವಿಂದಚಾಮಿ ಆಕೆಯ ಮೇಲೆ ಹಲ್ಲೆ ನಡೆಸಿ ವಲ್ಲತ್ತೋಳ್ ನಗರ ನಿಲ್ದಾಣದ ಬಳಿ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ್ದ.
ಇದರ ನಂತರ ನಡೆದಿದ್ದು ಇನ್ನೂ ಘೋರವಾಗಿತ್ತು. ರೈಲಿನಿಂದ ಕೆಳಕ್ಕೆ ಹಾರಿದ್ದ ಗೋವಿಂದಚಾಮಿ ಹಳಿಗಳ ಮೇಲೆ ಗಾಯಗೊಂಡು ಬಿದ್ದಿದ್ದ ಸೌಮ್ಯಾ ರನ್ನು ಇನ್ನೊಂದು ರೈಲ್ವೆ ಮಾರ್ಗದ ಬಳಿ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯ ಮೊಬೈಲ್ ಫೋನ್ ಮತ್ತು ಪರ್ಸ್ ನಲ್ಲಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಚಲಿಸಲು ಸಾಧ್ಯವಾಗದೆ ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಬಿದ್ದುಕೊಂಡಿದ್ದ ಸೌಮ್ಯಾರನ್ನು ಕಂಡ ಸ್ಥಳೀಯರು ಮುಲಂಕುನ್ನತುಕಾವು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದರು. ಗೋವಿಂದಚಾಮಿ ಫೆ.4ರಂದು ಪಾಲಕ್ಕಾಡ್ ನಲ್ಲಿ ಪೋಲಿಸರ ಬಲೆಗೆ ಬಿದ್ದಿದ್ದ. ಎರಡು ದಿನಗಳ ಬಳಿಕ ಫೆ.6ರಂದು ಸೌಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಗೋವಿಂದಚಾಮಿಯ ಕ್ರಿಮಿನಲ್ ಇತಿಹಾಸ ಮತ್ತು ಸೌಮ್ಯಾಳ ಮೇಲೆ ಆತ ಮೆರೆದಿದ್ದ ಕ್ರೌರ್ಯದಿಂದ ಇಡೀ ಕೇರಳ ಆಘಾತಗೊಂಡಿತ್ತು. 2012ರಲ್ಲಿ ಆತನಿಗೆ ಮರಣ ದಂಡನೆಯನ್ನು ವಿಧಿಸಿದ್ದ ತ್ವರಿತ ನ್ಯಾಯಾಲಯವು ಆತನನ್ನು ಪುನರಾವರ್ತಿತ ಅಪರಾಧಿ ಎಂದು ಬಣ್ಣಿಸಿತ್ತು. ಅತ್ಯಾಚಾರವು ಸೌಮ್ಯಾಳ ಸಾವಿಗೆ ನೇರ ಕಾರಣವಾಗಿತ್ತು ಮತ್ತು ಪ್ರಕರಣವು ಸಮಾಜದ ಸಾಮೂಹಿಕ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡಿದೆ ಎನ್ನುವುದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಂಡಿದ್ದರು.
ಆದರೆ ಕಾನೂನು ಹೋರಾಟ ಅಲ್ಲಿಗೇ ಮುಗಿದಿರಲಿಲ್ಲ. 2016ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸೌಮ್ಯಾಗೆ ಆಗಿದ್ದ ಗಾಯಗಳು ಗೋವಿಂದಚಾಮಿ ರೈಲಿನಿಂದ ಹೊರಕ್ಕೆ ತಳ್ಳಿದ್ದರಿಂದ ಉಂಟಾಗಿದ್ದವು ಎನ್ನುವುದನ್ನು ಸಾಬೀತು ಮಾಡಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿ ಕೊಲೆ ಆರೋಪವನ್ನು ತಳ್ಳಿಹಾಕಿತ್ತು. ಆದಾಗ್ಯೂ ಅತ್ಯಾಚಾರಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಆತನ ಕೃತ್ಯಗಳು ನಿರ್ವಿವಾದವಾಗಿ ಅನಾಗರಿಕವಾಗಿದ್ದವು ಎಂದು ಹೇಳಿತ್ತು.
ಸೌಮ್ಯಾ ಪ್ರಕರಣವು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಇಂದಿಗೂ ಇದನ್ನು ಕೇರಳದಲ್ಲಿಯ ಅತ್ಯಂತ ದುಃಖಕರ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.







