ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ನೀಡಿದ್ದ ವಜಾಹತ್ ಖಾನ್ ನಾಪತ್ತೆ!
ನನ್ನ ಪುತ್ರ ನಾಪತ್ತೆಯಾಗಿದ್ದಾನೆ, ನಮ್ಮ ಕುಟುಂಬಕ್ಕೆ ನಿರಂತರ ಬೆದರಿಕೆ ಕರೆಗಳು ಬರುತ್ತಿದೆ: ಖಾನ್ ತಂದೆ ಆರೋಪ

ಶರ್ಮಿಷ್ಠಾ ಪನೋಲಿ | PTI
ಹೊಸದಿಲ್ಲಿ : "ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ನೀಡಿದ ನನ್ನ ಪುತ್ರ ನಾಪತ್ತೆಯಾಗಿದ್ದಾನೆ, ನಮ್ಮ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ" ಎಂದು ವಜಾಹತ್ ಖಾನ್ ತಂದೆ ಆರೋಪಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಗಾರ್ಡನ್ ರೀಚ್ ಪೊಲೀಸ್ ಠಾಣೆಯಲ್ಲಿ ವಜಾಹತ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಮೇ 30ರಂದು ಹರ್ಯಾಣದ ಗುರುಗ್ರಾಮ್ನಲ್ಲಿ ಶರ್ಮಿಷ್ಠಾ ಪನೋಲಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಜೂ.13ರವರೆಗೆ ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ವೀಡಿಯೊ ಮೂಲಕ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪ ಶರ್ಮಿಷ್ಠಾ ಮೇಲಿದೆ.
ಕೋಲ್ಕತ್ತಾ ಪೊಲೀಸರು ಶರ್ಮಿಷ್ಠಾ ಪನೋಲಿಯನ್ನು ಬಂಧಿಸಿದ ಬೆನ್ನಲ್ಲೇ ಆಕೆಯನ್ನು ಬಿಡುಗಡೆ ಮಾಡುವಂತೆ ಹಲವು ಬಿಜೆಪಿ ನಾಯಕರು ಆಗ್ರಹಿಸಿದ್ದರು.
ಇದಲ್ಲದೆ ಶ್ರೀ ರಾಮ್ ಸ್ವಾಭಿಮಾನ ಪರಿಷತ್ ಕೋಲ್ಕತ್ತಾ ಪೊಲೀಸರಿಗೆ ಖಾನ್ ವಿರುದ್ಧ ದೂರು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದೆ.
ನನ್ನ ಪುತ್ರ ಕಳೆದ ರವಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾನೆ. ನಮ್ಮ ಕುಟುಂಬ ನಿರಂತರವಾಗಿ ಬೆದರಿಕೆ ಕರೆಯನ್ನು ಸ್ವೀಕರಿಸುತ್ತಿದೆ. ʼನನ್ನ ಮಗ ಅಮಾಯಕ ಮತ್ತು ಜಾತ್ಯತೀತ. ಅವನು ಹಿಂದೂ ಧರ್ಮವನ್ನು ಅವಮಾನಿಸಲು ಸಾಧ್ಯವಿಲ್ಲ. ಶರ್ಮಿಷ್ಠಾ ಬಂಧನದ ನಂತರ ನಮಗೆ ಬೆದರಿಕೆಗಳು ಬರುತ್ತಿವೆʼ ಎಂದು ಹೇಳಿದ್ದಾರೆ.







