ಮಣಿಪುರ: ಜಂಟಿ ಕಾರ್ಯಾಚರಣೆ; 35 ಶಸ್ತ್ರಾಸ್ತ್ರ, ಸ್ಪೋಟಕ ಪತ್ತೆ

ಸಾಂದರ್ಭಿಕ ಚಿತ್ರ | PTI
ಗುವಾಹಟಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬೆಟ್ಟ ಹಾಗೂ ಕಣಿವೆ ಪ್ರದೇಶಗಳಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ಕಳೆದ ಒಂದು ವಾರಕ್ಕೂ ಅಧಿಕ ಕಾಲ ನಡೆಸಿದ ಸರಣಿ ಜಂಟಿ ಕಾರ್ಯಾಚರಣೆ ಸಂದರ್ಭ 35 ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಪತ್ತೆ ಹಚ್ಚಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಲಂಗ್ಖೊಂಗ್ಜಾಂಗ್ ರಿಡ್ಜ್ನಲ್ಲಿ ಅಸ್ಸಾಂ ರೈಫಲ್ಸ್ ಹಾಗೂ ಪೊಲೀಸರ ಸಹಯೋಗದೊಂದಿಗೆ ಸೇನೆ ಜನವರಿ 19ರಂದು ನಡೆಸಿದ ಕಾರ್ಯಾಚರಣೆಯಲ್ಲಿ 1 ಮಾರ್ಪಡಿಸಿದ ಸ್ನೈಫರ್ ರೈಫಲ್, ಐದು 9 ಎಂಎಂ ಪಿಸ್ತೂಲ್, 2 ಸಿಂಗಲ್ ಬ್ಯಾರಲ್ ರೈಫಲ್, ಗ್ರೆನೇಡ್ಗಳು, ಸ್ಫೋಟಕಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಪತ್ತೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಬಿಷ್ಣುಪುರ ಹಾಗೂ ಚುರಾಚಾಂದ್ಪುರ ಜಿಲ್ಲೆಗಳ ಗಡಿಯಲ್ಲಿರುವ ಡಂಪಿ ರಿಡ್ಜ್ನ ಖುಗಾ ನದಿ ಹಾಗೂ ಅಂಚಿನ ಸಮೀಪ ಸಿಆರ್ಪಿಎಫ್ ಹಾಗೂ ಪೊಲೀಸರ ಸಹಯೋಗದಲ್ಲಿ ಸೇನೆ ನಡೆಸಿದ ಇದೇ ರೀತಿಯ ಇನ್ನೊಂದು ಕಾರ್ಯಾಚರಣೆ ಸಂದರ್ಭ ಒಂದು 9 ಎಂಎಂ ಸಬ್ ಮೆಷಿನ್ ಗನ್, ಒಂದು .303 ರೈಫಲ್, 1 ಪಿಸ್ತೂಲ್, 1 ಸಿಂಗಲ್ ಬ್ಯಾರಲ್ ಬ್ರೀಚ್ ಲೋಡೆಡ್ ಗನ್, ಒಂದು ದೇಶಿ ನಿರ್ಮಿತ ಮೋರ್ಟರ್, 1 ಗ್ರೆನೇಡ್ ಲಾಂಚರ್, ಗ್ರೆನೇಡ್, ಸ್ಪೋಟಕ ಹಾಗೂ ಸಶ್ತ್ರಾಸ್ತ್ರ ಸಂಗ್ರಹಾಗಾರವನ್ನು ಪತ್ತೆ ಹಚ್ಚಿದ್ದಾರೆ ಎಂದು ಹೇಳಿಕೆ ತಿಳಿಸಿದೆ.







