ಮಣಿಪುರ | ಬಿರೇನ್ ಸಿಂಗ್ ನಡೆಸಿದ್ದ ಸಭೆಯಲ್ಲಿ ಕೇವಲ 20 ಎನ್ಡಿಎ ಶಾಸಕರು ಭಾಗಿ!

ಎನ್.ಬಿರೇನ್ ಸಿಂಗ್ | PC : PTI
ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಾವು ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಕರೆದಿದ್ದ ಎನ್ಡಿಎ ಶಾಸಕರ ಸಭೆಗೆ, 46 ಎನ್ಡಿಎ ಶಾಸಕರ ಪೈಕಿ ಕೇವಲ 20 ಮಂದಿ ಶಾಸಕರು ಹಾಜರಾಗಿದ್ದರು ಎಂದು ವರದಿಯಾಗಿದೆ.
ಮಣಿಪುರದ ಎನ್ಡಿಎ ಮೈತ್ರಿಕೂಟದಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಹಾಗೂ ಸಂಯುಕ್ತ ಜನತಾ ದಳ ಪಕ್ಷಗಳಿವೆ. ಇದಾದ ನಂತರ, ಚಾರ್ಟರ್ಡ್ ವಿಮಾನದಲ್ಲಿ ದಿಲ್ಲಿಗೆ ತೆರಳಿದ್ದ ಬಿರೇನ್ ಸಿಂಗ್, ಫೆಬ್ರವರಿ 9ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಇಂದಿನಿಂದ (ಫೆಬ್ರವರಿ 10) ಪ್ರಾರಂಭಗೊಳ್ಳಲಿದ್ದ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಬಿರೇನ್ ಸಿಂಗ್ ಈ ಸಭೆಯನ್ನು ಆಯೋಜಿಸಿದ್ದರು ಎನ್ನಲಾಗಿದೆ. ಆದರೆ, ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ಭಿನ್ನಮತೀಯರು ತಮ್ಮ ನಾಯಕತ್ವದ ಬದಲಾವಣೆಗೆ ಆಗ್ರಹಿಸುತ್ತಿರುವುದರಿಂದ, ತಮ್ಮೊಂದಿಗೆ ಎಷ್ಟು ಶಾಸಕರಿದ್ದರು ಎಂಬುದನ್ನು ಕಂಡುಕೊಳ್ಳಿಲು ಈ ಸಭೆಯನ್ನು ಆಯೋಜಿಸಿದ್ದರು ಎಂದು ಹೇಳಲಾಗಿದೆ.
ಮೇ 3, 2023ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಕುಕಿ-ಝೋ ಹಾಗೂ ಮೈತೇಯಿ ಗುಂಪುಗಳ ನಡುವಿನ ಸುದೀರ್ಘಾವಧಿಯ ಜನಾಂಗೀಯ ಹಿಂಸಾಚಾರವನ್ನು ಬಿರೇನ್ ಸಿಂಗ್ ನಿಭಾಯಿಸಿದ ರೀತಿಯಿಂದ ಅಸಮಾಧಾನಗೊಂಡಿದ್ದ ಭಿನ್ನಮತೀಯರು, ಅವರ ನಾಯಕತ್ವದ ಬದಲಾವಣೆಗೆ ಪಟ್ಟು ಹಿಡಿದಿದ್ದರು.
ಇದರೊಂದಿಗೆ, ಬಿರೇನ್ ಸಿಂಗ್ ಅವರದೆಂದು ಹೇಳಲಾದ ಆಡಿಯೊ ತುಣುಕಿನ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿರುವುದು ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್, ಬಿರೇನ್ ಸಿಂಗ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರಿಂದ ಬಿಜೆಪಿ ವರಿಷ್ಠರು ಅವರ ರಾಜೀನಾಮೆ ಪಡೆದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.







