ಮಣಿಪುರ: ಹಮಾರ್ ನಾಯಕನಿಗೆ ಹಲ್ಲೆ ಆರೋಪ; ಚುರಾಚಂದಪುರದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

PC : indiatodayne.in
ಇಂಫಾಲ: ಹಮಾರ್ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಯಕರೋರ್ವರಿಗೆ ಹಲ್ಲೆ ನಡೆಸಿದ ಆರೋಪದ ಬಳಿಕ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಚುರಾಚಂದಪುರದಲ್ಲಿ ಮಣಿಪುರ ಸರಕಾರ ಸೋಮವಾರ ನಿಷೇದಾಜ್ಞೆ ಜಾರಿಗೊಳಿಸಿದೆ.
ಹಮಾರ್ ಇನ್ಪುಯಿಯ ಪ್ರಧಾನ ಕಾರ್ಯದರ್ಶಿ ರಿಚರ್ಡ್ ಹಮಾರ್ ಅವರ ಮೇಲೆ ಝೆನ್ಹಾಂಗ್ ಲಾಮ್ಕಾದಲ್ಲಿರುವ ವಿ.ಕೆ. ಮೋಂಟೆಸ್ಸರಿ ಸಂಕೀರ್ಣದ ಒಳಗೆ ರವಿವಾರ ರಾತ್ರಿ 7.30ಕ್ಕೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಹಲ್ಲೆ ಘಟನೆಯ ಬಳಿಕ ದುಷ್ಕರ್ಮಿಗಳನ್ನು ಗುರುತಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರತಿಭಟನಕಾರರು ಪಟ್ಟಣದಲ್ಲಿ ಬಂದ್ ಮಾಡಲು ಯತ್ನಿಸಿದರು. ಕೆಲವು ಪ್ರದೇಶಗಳಲ್ಲಿ ಗುಂಪುಗಳು ಕಲ್ಲು ತೂರಾಟ ನಡೆಸಿರುವ ಬಗ್ಗೆ ಕೂಡ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ರಿಚರ್ಡ್ ಹಮಾರ್ ಅವರ ಮೇಲಿನ ದಾಳಿಯನ್ನು ಹಮಾರ್ ಇನ್ಪುಯಿ ಖಂಡಿಸಿದೆ.





