ಮಣಿಪುರ | ಮೈತೈ ನಾಯಕನ ಬಂಧನ ಖಂಡಿಸಿ ಮುಂದುವರಿದ ಪ್ರತಿಭಟನೆ

PC : PTI
ಇಂಫಾಲ: ಆರಂಬಾಯಿ ಟೆಂಗೋಲ್ ನಾಯಕ ಕಾನನ್ ಸಿಂಗ್ ಹಾಗೂ ಇತರ ನಾಲ್ವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಣಿಪುರದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಪ್ರತಿಭಟನಕಾರರು ಇಂಫಾಲ ಕಣಿವೆಯ ಹಲವು ಜಿಲ್ಲೆಗಳಲ್ಲಿ ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಇಳಿದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಂಫಾಲ ಪೂರ್ವ ಜಿಲ್ಲೆಯ ಖುರಾಯಿ ಲಾಮ್ಲೋಂಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘರ್ಷಣೆ ಭುಗಿಲೆದ್ದಿದ್ದು, ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಹಲವು ಸುತ್ತು ಅಶ್ರುವಾಯು ಸೆಲ್ ಹಾಗೂ ರಬ್ಬರ್ ಗುಂಡುಗಳನ್ನು ಪ್ರಯೋಗಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಕಾರರು ಥೌಬಾಲ್ ಹಾಗೂ ಕಾಕ್ಚಿಂಗ್ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಿದರು, ಟಯರ್ಗಳನ್ನು ಉರಿಸಿ ಪ್ರತಿಭಟನೆ ನಡೆಸಿದರು. ಅಪರಿಚಿತ ದುಷ್ಕರ್ಮಿಗಳು ಸೋಮವಾರ ಸಂಜೆ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಬಳಿಕ ಇಂಫಾಲ ಪಶ್ಚಿಮ ಜಿಲ್ಲೆಯ ಟೇರಾ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಯಿತು.
‘‘ಟೇರಾ ಪ್ರದೇಶದಲ್ಲಿ ಪ್ರತಿಭಟನಕಾರರು ಇರಿಸಿದ್ದ ರಸ್ತೆ ತಡೆಗಳನ್ನು ಸಿಆರ್ಪಿಎಫ್ ಸಿಬ್ಬಂದಿ ತೆರವುಗೊಳಿಸುತ್ತಿರುವ ಸಂದರ್ಭ ಅಪರಿಚಿತ ದುಷ್ಕರ್ಮಿಗಳು ಸಣ್ಣ ಶಸ್ತ್ರಾಸ್ತ್ರ ಬಳಸಿ ಕನಿಷ್ಠ 7 ಸುತ್ತು ಗುಂಡು ಹಾರಿಸಿದರು. ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸಲು ರಾಜ್ಯ ಪೊಲೀಸರೊಂದಿಗೆ ಅರೆ ಸೇನಾ ಪಡೆ ಧಾವಿಸಿತು. ಆದರೆ, ಇನ್ನಷ್ಟು ತೀವ್ರ ಕಾರ್ಯಾಚರಣೆಯನ್ನು ಪ್ರತಿಭಟನಕಾರರು ವಿಫಲಗೊಳಿಸಿದರು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆ ನಂಬೋಲ್ನಲ್ಲಿ ಪ್ರತಿಭಟನಕಾರರೊಂದಿಗಿನ ಘರ್ಷಣೆಯ ಸಂದರ್ಭ ಕನಿಷ್ಠ ಇಬ್ಬರು ಪೊಲೀಸ್ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ‘‘ನಂಬೋಲ್ನಲ್ಲಿ ಪ್ರತಿಭಟನಕಾರರೊಂದಿಗಿನ ಘರ್ಷಣೆಯ ಸಂದರ್ಭ ಮಣಿಪುರದ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆಯ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ ಬೀದಿಗಳು ಮಂಗಳವಾರ ಬೆಳಗ್ಗೆ ಸಾಮಾನ್ಯ ವ್ಯಾಪಾರ ಚಟುವಟಿಕೆಗಳಿಗೆ ಸಾಕ್ಷಿಯಾದವು. ಅನೇಕರು ರಸ್ತೆ ಬದಿಯ ವ್ಯಾಪಾರಿಗಳಿಂದ ಅಗತ್ಯದ ವಸ್ತುಗಳನ್ನು ಖರೀದಿಸಲು ಧಾವಿಸಿದರು.