ಮಣಿಪುರಕ್ಕೆ ಪ್ರಧಾನಿ ಮೋದಿ ಸಂಭಾವ್ಯ ಭೇಟಿ: ಫುಂಗ್ಯಾರ್ ವಿಧಾನಸಭಾ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ಬಿಜೆಪಿ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

ಸಾಂದರ್ಭಿಕ ಚಿತ್ರ
ಇಂಫಾಲ: ಈಶಾನ್ಯ ರಾಜ್ಯವಾದ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಭೇಟಿಗೂ ಮುನ್ನವೇ ಮಣಿಪುರದ ಉಖ್ರುಲ್ ಜಿಲ್ಲೆಯ ಫುಂಗ್ಯಾರ್ ವಿಧಾನಸಭಾ ಕ್ಷೇತ್ರದ ಕನಿಷ್ಠ 43 ಮಂದಿ ಬಿಜೆಪಿ ಸದಸ್ಯರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಬಿಜೆಪಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗಾ ಬಾಹುಳ್ಯದ ಈ ಜಿಲ್ಲೆಯ ಫುಂಗ್ಯಾಲ್ ಮಂಡಲ್ ನ ಹುದ್ದೆಗಳಿಂದ ಕೆಳಗಿಳಿದವರ ಪೈಕಿ ಫುಂಗ್ಯಾಲ್ ಮಂಡಲ್ ಅಧ್ಯಕ್ಷ, ಮಹಿಳಾ ಮೋರ್ಚಾದ ಮುಖ್ಯಸ್ಥೆಯರು, ಯುವ ಮತ್ತು ಕಿಸಾನ್ ಮೋರ್ಚಾ ಹಾಗೂ ಫುಂಗ್ಯಾಲ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷರು ಸೇರಿದ್ದಾರೆ.
ಈ ರಾಜೀನಾಮೆಗಳ ಕುರಿತು ಬಿಜೆಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ನಾವು ಪಕ್ಷದೊಳಗಿನ ಚಟುವಟಿಕೆಗಳಿಂದ ತೀವ್ರವಾಗಿ ಘಾಸಿಗೊಂಡಿದ್ದೇವೆ. ಸಂವಿಧಾನ, ಒಳಗೊಳ್ಳುವಿಕೆ ಹಾಗೂ ತಳಮಟ್ಟದ ನಾಯಕತ್ವಕ್ಕೆ ಗೌರವದ ಕೊರತೆ ನಾವು ನಮ್ಮ ಹುದ್ದೆಗಳಿಂದ ಕೆಳಗಿಳಿಯಲು ಪ್ರಮುಖ ಕಾರಣಗಳಾಗಿವೆ” ಎಂದು ಬಿಜೆಪಿ ಸದಸ್ಯರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
“ಪಕ್ಷ ಹಾಗೂ ಅದರ ಸೈದ್ಧಾಂತಿಕ ಪರವಾದ ನಮ್ಮ ಬದ್ಧತೆ ಎಂದಿಗೂ ಅಚಲವಾಗಿದೆ. ನಾವು ನಮ್ಮ ಸಮುದಾಯ ಹಾಗೂ ಮಣಿಪುರ ಜನತೆಗಾಗಿನ ಕಲ್ಯಾಣಕ್ಕಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ” ಎಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮೇ 2023ರಲ್ಲಿ ಕುಕಿ-ಝೋ ಹಾಗೂ ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ. ಈ ಜನಾಂಗೀಯ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಮಂದಿ ನಿರ್ವಸತಿಗರಾಗಿದ್ದರು.







