ಮಣಿಪುರ | ಮನೆಗಳಿಗೆ ಮರಳುತ್ತಿದ್ದ ನಾಗರಿಕರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ

Photo Credit : PTI
ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಶನಿವಾರ ಸ್ಥಳಾಂತರಗೊಂಡ ನಾಗರಿಕರು ತಮ್ಮ ಮನೆಗಳಿಗೆ ಮರಳಲು ನಡೆಸಿದ ಪ್ರಯತ್ನವು ಉದ್ವಿಗ್ನತೆಯ ರೂಪ ಪಡೆದಿದ್ದು, ಭದ್ರತಾ ಪಡೆ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಮೇ ನಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ಬಳಿಕ ವಿವಿಧ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ನೂರಾರು ಮಂದಿ, ಹೊರವಲಯದ ಗ್ವಾಲ್ತಾಬಿ ಪ್ರದೇಶದಲ್ಲಿರುವ ತಮ್ಮ ಮನೆಗಳತ್ತ ದೊಡ್ಡ ಪ್ರಮಾಣದಲ್ಲಿ ಸಾಗಿದರು. ಯೈಂಗಂಗ್ಪೋಕ್ಪಿ ಪ್ರದೇಶ ತಲುಪಿದಾಗ ಭದ್ರತಾ ಪಡೆಗಳು ಅವರನ್ನು ತಡೆದು, ಮುಂದುವರಿಯುವುದಕ್ಕೆ ನಿರ್ಬಂಧ ವಿಧಿಸಿತು
ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಮುಂದುವರೆದ ಪರಿಣಾಮ ಉದ್ವಿಗ್ನತೆ ಹೆಚ್ಚಾಗಿದ್ದು, ಅವರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಹಲವು ಸುತ್ತು ಹಾರಿಸಬೇಕಾಯಿತು.
“ಸರ್ಕಾರ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪನೆಯಾಗಿದೆ ಎಂದು ಹೇಳುತ್ತದೆ. ಹಾಗಿದ್ದರೆ ನಮಗೆ ಮನೆಗಳಿಗೆ ಮರಳಲು ಅವಕಾಶ ನೀಡದಿರುವುದು ಏಕೆ?” ಎಂದು ಪ್ರತಿಭಟನಾಕಾರ್ತಿ ಎಸ್. ಇಬೆಮ್ಚಾ ದೇವಿ ಪ್ರಶ್ನಿಸಿದರು.
ಘರ್ಷಣೆ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಅಧಿಕೃತ ವಲಯ ತಿಳಿಸಿದೆ.
ನವೆಂಬರ್ 21ರಿಂದ ಆರಂಭವಾದ ಸಂಗೈ ಉತ್ಸವದ ನಂತರ ಆಂತರಿಕವಾಗಿ ಸ್ಥಳಾಂತರಗೊಂಡವರು (IDP) ಮತ್ತು ಭದ್ರತಾ ಪಡೆಗಳ ನಡುವೆ ಇಂತಹ ಸಂಘರ್ಷಗಳು ಹಲವಾರು ಬಾರಿ ನಡೆದಿದೆ ಎಂದು ತಿಳಿದು ಬಂದಿದೆ.







