Manipur | ಸರಣಿ ಸ್ಫೋಟಗಳಲ್ಲಿ ಇಬ್ಬರಿಗೆ ಗಾಯ

Photo Credit : indiatoday.in
ಇಂಫಾಲ,ಜ.5: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಬೆನ್ನುಬೆನ್ನಿಗೆ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದರು.
ಬೆಳಿಗ್ಗೆ 5:45ರ ಸುಮಾರಿಗೆ ಫೌಗಾಕ್ಚಾವೊ ಪೋಲಿಸ್ ಠಾಣಾ ವ್ಯಾಪ್ತಿಯ ನಗಾನುಕನ್ ನಲ್ಲಿಯ ಪಾಳು ಬಿದ್ದ ಮನೆಯೊಂದರಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು,ಸುಧಾರಿತ ಸ್ಫೋಟಕ ಸಾಧನದಿಂದ (IED) ಸ್ಫೋಟ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಮೇ 2023ರಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಈ ಮನೆಯು ಪಾಳು ಬಿದ್ದಿದ್ದು,ಅದರ ಮಾಲಿಕ ಪ್ರಸ್ತುತ ತನ್ನ ಕುಟುಂಬದೊಂದಿಗೆ ಪರಿಹಾರ ಶಿಬಿರದಲ್ಲಿ ವಾಸವಾಗಿದ್ದಾನೆ.
ಸ್ಫೋಟದ ಸುದ್ದಿ ತಿಳಿದು ಸ್ಥಳೀಯರು ಸ್ಥಳದಲ್ಲಿ ಸೇರಿದ್ದ ಸಂದರ್ಭ ಬೆಳಿಗ್ಗೆ 8:45ರ ಸುಮಾರಿಗೆ ಸುಮಾರು 200 ಮೀ.ಅಂತರದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದರು.
ಸನತೊಂಬಾ ಸಿಂಗ್ ಮತ್ತು ಇಂದುಬಾಲಾ ದೇವಿ ಎನ್ನುವವರ ಕಾಲುಗಳಿಗೆ ಗಾಯಗಳಾಗಿದ್ದು,ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಸ್ಫೋಟ ನಡೆದ ಸ್ಥಳಗಳನ್ನು ಪರಿಶೀಲಿಸಿರುವ ಪೋಲಿಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ನಡುವೆ ಸ್ಫೋಟಗಳು ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದ ಭದ್ರತಾ ಪಡೆಗಳೊಂದಿಗೆ ಕುಪಿತ ಸ್ಥಳೀಯರು ವಾಗ್ವಾದ ನಡೆಸಿದ್ದು,ಸಮೀಪದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳಿದ್ದರೂ ಭದ್ರತಾ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
ಸಮೀಪದಲ್ಲಿಯ ತಾತ್ಕಾಲಿಕ ಭದ್ರತಾ ಬಂಕರ್ವೊಂದನ್ನು ಸಹ ಸ್ಥಳೀಯರು ಕೆಡವಿದ್ದಾರೆ.







