ಮಣಿಪುರ| ಕುಕಿ ಸಮುದಾಯದ ಮಹಿಳೆಯನ್ನು ವಿವಾಹವಾಗಿದ್ದ ಮೈತೈ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

ಮಯಂಗ್ಲಂಗ್ಬಮ್ ರಿಶಿಕಾಂತ | Photo Credit : NDTV
ಇಂಫಾಲ, ಜ. 22: ಮಣಿಪುರದ ಚುರಚಾಂದ್ಪುರದಲ್ಲಿ ಬುಧವಾರ ಸಂಜೆ ಶಂಕಿತ ಕುಕಿ ಗುಂಪು ದಂಪತಿಯನ್ನು ಅಪಹರಿಸಿ ಮೆತೈ ಸಮುದಾಯಕ್ಕೆ ಸೇರಿದ ಗಂಡನನ್ನು ಕೊಂದಿದ್ದಾರೆ. ಇದರೊಂದಿಗೆ, ತಿಂಗಳುಗಳ ಕಾಲ ರಾಜ್ಯದಲ್ಲಿ ನೆಲೆಸಿದ್ದ ಶಾಂತಿ ಛಿದ್ರಗೊಂಡಿದೆ.
ಮೃತ ವ್ಯಕ್ತಿಯನ್ನು ಮೆತೈ ಸಮುದಾಯಕ್ಕೆ ಸೇರಿದ 38 ವರ್ಷದ ಮಯಂಗ್ಲಂಗ್ಬಮ್ ರಿಶಿಕಾಂತ ಎಂಬುದಾಗಿ ಗುರುತಿಸಲಾಗಿದೆ. ಅವರು ಮೆತೈ ಸಮುದಾಯದ ಪ್ರಾಬಲ್ಯದ ಕಕ್ಚಿಂಗ್ ಜಿಲ್ಲೆಯ ನಿವಾಸಿಯಾಗಿದ್ದರು. ಆದರೆ, ಅವರು ತನ್ನ ಪತ್ನಿ ಚಿಂಗ್ನು ಹಾವೊಕಿಪ್ ಜೊತೆಗೆ ಕುಕಿ ಪ್ರಾಬಲ್ಯದ ಚುರಚಾಂದ್ಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದರು.
ಯುನೈಟೆಡ್ ಕುಕಿ ನ್ಯಾಶನಲ್ ಆರ್ಮಿಗೆ ಸೇರಿದ ಶಸ್ತ್ರಸಜ್ಜಿತರು ದಂಪತಿಯನ್ನು ಚುರಚಾಂದ್ಪುರದ ಟುಯಿಬುವೊಂಗ್ನಿಂದ ಅಪಹರಿಸಿ ನಟ್ಜಂಗ್ಗೆ ಕರೆದೊಯ್ದರು. ಅಲ್ಲಿ ಅವರು ಗಂಡನನ್ನು ಕೊಂದರು. ಗಂಡನನ್ನು ಕೊಂದ ಬಳಿಕ ತನ್ನನ್ನು ವಾಹನವೊಂದರಿಂದ ಹೊರಗೆಸೆದರು ಎಂದು ಹೆಂಡತಿ ಹಾವೊಕಿಪ್ ಹೇಳಿದ್ದಾರೆ.
ತನ್ನ ಗಂಡನೊಂದಿಗೆ ಚುರಚಾಂದ್ಪುರದಲ್ಲಿ ವಾಸಿಸಲು ಹಾವೊಕಿಪ್ ಕುಕು ನ್ಯಾಶನಲ್ ಆರ್ಗನೈಸೇಶನ್ನ ಅನುಮತಿ ಕೋರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ಸಂಘಟನೆಯು ಸರಕಾರದೊಂದಿಗೆ ಯುದ್ಧವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ದಂಪತಿ ಯಾವುದೇ ಅನುಮತಿ ಕೇಳಿರಲಿಲ್ಲ ಎಂದು ಕುಕಿ ನ್ಯಾಶನಲ್ ಆರ್ಗನೈಸೇಶನ್ ಹೇಳಿಕೊಂಡಿದೆ.
2023 ಮೇ ತಿಂಗಳಲ್ಲಿ ಮಣಿಪುರದಲ್ಲಿ ಸ್ಫೋಟಗೊಂಡ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 60,000 ಮಂದಿ ನಿರ್ವಸಿತರಾಗಿದ್ದಾರೆ.







