ಮಣಿಪುರ: ಕುಕಿ ನಾಯಕನ ಮನೆಗೆ ಬೆಂಕಿ ಹಚ್ಚಿದ ಗುಂಪು

PC : X/@BikramjitMK
ಚುರಾಚಾಂದ್ಪುರ, ಸೆ. 15: ಕುಕಿ ನಾಯಕನ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿದ ಬಳಿಕ ಮಣಿಪುರದ ಚುರಾಚಾಂದ್ಪುರ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕುಕಿ ನ್ಯಾಷನಲ್ ಆರ್ಗನೈಸೇಷನ್ (ಕೆಎನ್ಒ) ನಾಯಕ ಕೆಲ್ವಿನ್ ಐಕೆಂಥಾಂಗ್ ನಿವಾಸಕ್ಕೆ ರವಿವಾರ ತಡ ರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆದರೆ, ಚುರಾಚಾಂದ್ಪುರದ ಸ್ಥಳೀಯರ ಒಂದು ಗುಂಪು ಈ ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ ಎಂದು ಹೇಳಿದ್ದಾರೆ.
ದಮನ ಕಾರ್ಯಾಚರಣೆ ನಡೆಸದಿರುವ ಒಪ್ಪಂದಕ್ಕೆ ಕೆಎನ್ಒ ಕೇಂದ್ರ ಸರಕಾರದೊಂದಿಗೆ ಸಹಿ ಹಾಕಿದೆ.
ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಕೇವಲ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.
ಕುಕಿ ರೆ ಕೌನ್ಸಿಲ್ (ಕೆಝಡ್ಸಿ) ಹಾಗೂ ಇಂಡೀಜಿನಿಯಸ್ ಟ್ರೈಬಲ್ ಲೀಡರ್ಸ್ ಫಾರಂ (ಐಟಿಎಲ್ಎಫ್)ನ ವಕ್ತಾರರಾಗಿರುವ ಇನ್ನೋರ್ವ ಕುಕಿ ನಾಯಕ ಗಿಂಝಾ ವುವಾಲ್ರೆಂಗ್ ಅವರ ನಿವಾಸಕ್ಕೆ ಕೂಡ ದುಷ್ಕರ್ಮಿಗಳು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ, ಸಕಾಲಕ್ಕೆ ಮಧ್ಯಪ್ರವೇಶಿಸಿದ ಸ್ಥಳೀಯರು ಇದನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





