ಮಣಿಪುರ: ಮತ್ತೋರ್ವ ಸಂಪಾದಕನ ಬಂಧನ
ಇಂಫಾಲ: ಮಣಿಪುರದ ದಿನಪತ್ರಿಕೆ ಸಂಪಾದಕರೊಬ್ಬರನ್ನು ಶುಕ್ರವಾರ ಬಂಧಿಸಲಾಗಿದ್ದು, ಅವರ ವಿರುದ್ಧ ರಾಜ್ಯದ ಮೊರೇಹ್ ಪಟ್ಟಣದ ಕಾನೂನು ಹಾಗೂ ಸುವ್ಯವಸ್ಥೆಯ ಕುರಿತ ವರದಿ ಮಾಡುವ ಮೂಲಕ ಧರ್ಮ ಹಾಗೂ ಜನಾಂಗ ದ್ವೇಷಕ್ಕೆ ಉತ್ತೇಜನ ನೀಡಿದ ಆರೋಪ ಹೊರಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಪತ್ರಕರ್ತರನ್ನು ಬಂಧಿಸುತ್ತಿರುವ ಎರಡನೇ ಘಟನೆ ಇದಾಗಿದೆ.
ಇಂಫಾಲದ ‘ಹ್ಯುಯೆನ್ ಲಾನ್ಪಾವೊ’ ದಿನಪತ್ರಿಕೆಯ ಸಂಪಾದಕ ಧನಬೀರ್ ಮೆಯಿಬಾಮ್ ಅವರ ವಿರುದ್ಧ ಕ್ರಿಮಿನಲ್ ಸಂಚು ಹಾಗೂ ಅಧಿಕೃತ ಗೌಪ್ಯತಾ ಕಾಯ್ದೆ-1923ರ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮಾಡಲಾಗಿದೆ.
ಅಕ್ಟೋಬರ್ 31ರಿಂದ ಹಲವು ದಾಳಿಗಳ ಪರಿಣಾಮ ಹಿರಿಯ ವಿಭಾಗೀಯ ಪೊಲೀಸ್ ಅಧಿಕಾರಿ ಮೃತಪಟ್ಟ ಹಾಗೂ ಭದ್ರತಾ ಪಡೆಗಳಿಗೆ ಸೇರಿದ 9 ಸಿಬ್ಬಂದಿ ಗಾಯಗೊಂಡ ಬಳಿಕ ಪ್ರಕಟಗೊಂಡ ಲೇಖನವನ್ನು ಮೈಬಮ್ ಅವರು ಪರಿಶೀಲಿಸಿದ್ದರು. ಮೆಯಿಬಮ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
‘ಕಂಗ್ಲೈಪಕ್ಕಿ ಮೈರ’ದ ಪ್ರಧಾನ ಸಂಪಾದಕ ವಾಂಗ್ಖೆಮ್ಚಾ ಶ್ಯಾಮ್ಜೈ ಅವರನ್ನು ಡಿಸೆಂಬರ್ 29ರಂದು ಬಂಧಿಸಿದ ದಿನಗಳ ಬಳಿಕ ಮೈಬಮ್ ಅವರ ಬಂಧನ ನಡೆದಿದೆ. ಶ್ಯಾಮ್ಜೈ ಅವರಿಗೆ ಡಿಸೆಂಬರ್ 31ರಂದು ಜಾಮೀನು ದೊರಕಿದೆ.