ಇಂಫಾಲ ಶೂಟೌಟ್ ಪ್ರಕರಣ: ಬಿಜೆಪಿ ಯುವಮೋರ್ಚಾದ ಮಾಜಿ ಅಧ್ಯಕ್ಷನ ಬಂಧನ

Photo : X/M Barish Sharma
ಇಂಫಾಲ: ಮಣಿಪುರದ ರಾಜಧಾನಿ ಇಂಫಾಲದಲ್ಲಿ ಅ.14ರಂದು ನಡೆದ ಸೆಘಾ ರಸ್ತೆಯಲ್ಲಿ ಗುಂಡಿನ ದಾಳಿ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಭಾರತೀಯ ಜನತಾ ಯುವಮೋರ್ಚಾದ ಮಾಜಿ ಅಧ್ಯಕ್ಷನನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ.
ಸೆಗಾ ರಸ್ತೆಯಲ್ಲಿ ನಡೆದ ಗುಂಡುಹಾರಾಟದ ಘಟನೆಯಲ್ಲಿ ಮನೋಹರಮಯೂನ್ ಬರಿಶ್ ಶರ್ಮಾ ಬಂಧಿತ ಆರೋಪಿಯಾಗಿದ್ದು, ಆತನಿಗೆ ಅ. 27ರವರೆಗೆ ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಬರಿಶ್ ಶರ್ಮಾನನ್ನು ಇಂಫಾಲ ಪೂರ್ವ ಜಿಲ್ಲೆಯಲ್ಲಿರುವ ವಾಂಗ್ಖೆಯ್ ನಿಂಗಥೆಮ್ ಪುಖ್ರಿ ಮಪಾಲ್ ನಲ್ಲಿರುವ ಆತನ ಮನೆಯಿಂದ ಇಂಫಾಲ ಪೊಲೀಸರ ತಂಡವೊಂದು ಶನಿವಾರ ರಾತ್ರಿ ಬಂಧಿಸಿದೆ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕರ್ಫ್ಯೂ ಉಲ್ಲಂಘನೆ, ಕ್ರಿಮಿನಲ್ ಬೆದರಿಕೆ ಹಾಗೂ ಕೊಲೆ ಯತ್ನದ ಆರೋಪವನ್ನು ಹೊರಿಸಲಾಗಿದೆ.
ಅ. 14ರಂದು ನಡೆದ ಇಂಫಾಲ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಪೊಲೀಸರು ಈಗಾಗಲೇ ಬಿಜೆವೈಎಂ ಮಣಿಪುರದ ಹಾಲಿ ಉಪಾಧ್ಯಕ್ಷ ನೊಂಗ್ತೊಂಬಂ ಟೋನಿ ಮೈತೆಯಿ (36) ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಬ್ರಹ್ಮಪುರ ಲಾಲ್ಜಿಯಾಕ್ಪಾ ಲೆಯಿಕಾಯ್ ನಿವಾಸಿಗಳಾದ ಅಲೆಕ್ಸ್ ನಿಂಗೊಂಬಂ ಹಾಗೂ ಗುರುಮಯೂಮ್ ರೇಬಾನ್ ಅವರನ್ನು ಅ. 15ರಂದು ಪೊಲೀಸರು ಬಂಧಿಸಿದ್ದರು.
ಬಳಿಕ ಇತರ ಮೂವರು ಆರೋಪಿಗಳಾದ ಬಿಜೆಪಿ ಮಣಿಪುರ ಪ್ರದೇಶದ ಇನ್ನೋರ್ವ ಉಪಾಧ್ಯಕ್ಷ ನಿಂಗ್ತೊಜಾಂ ವಿಕಿ (30) ಹಾಗೂ ಖಾಯಿದೆಮ್ ನಿಬಾಸ್ (33) ಅವರನ್ನು ಕೂಡಾ ಪೊಲೀಸರು ಬಂಧಿಸಿದ್ದು, ಅವರೆಲ್ಲರಿಗೂ ನ್ಯಾಯಾಲಯ ಅ. 25ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.







