ನ್ಯಾಯದ ಹೋರಾಟದ ನಡುವೆಯೇ ಇಹಲೋಕ ತ್ಯಜಿಸಿದ ಮಣಿಪುರ ಅತ್ಯಾಚಾರ ಸಂತ್ರಸ್ತೆ

PC: x.com/RahulSeeker
ಇಂಫಾಲ: ಮಣಿಪುರದ ಜನಾಂಗೀಯ ಸಂಘರ್ಷದ ವೇಳೆ 2023ರ ಮೇ ತಿಂಗಳಲ್ಲಿ ಉದ್ರಿಕ್ತ ಗುಂಪಿನಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಝೋ ಸಮುದಾಯಕ್ಕೆ ಸೇರಿದ ಯುವತಿ ನ್ಯಾಯ ದೊರಕುವ ಮೊದಲೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಅಪಹರಣಕಾರರು ಆಕೆಯನ್ನು ಅಪಹರಿಸಿ ಸಶಸ್ತ್ರ ಗುಂಪಿಗೆ ಹಸ್ತಾಂತರಿಸಿದ ಸಂದರ್ಭದಲ್ಲಿ ಆಕೆಗೆ 18 ವರ್ಷ ವಯಸ್ಸಾಗಿತ್ತು. ಮಹಿಳೆಯ ದೈಹಿಕ ಹಾಗೂ ಮಾನಸಿಕ ಆಘಾತಗಳು ವಾಸಿಯಾಗದೇ ಜನವರಿ 10ರಂದು ಆಕೆ ಕೊನೆಯುಸಿರೆಳೆದಳು ಎಂದು ದೇಶಿ ಬುಡಕಟ್ಟು ಮುಖಂಡರ ಒಕ್ಕೂಟ ಪ್ರಕಟಿಸಿದೆ.
ಅತ್ಯಾಚಾರ ಘಟನೆ ಬಗ್ಗೆ ಇಂಫಾಲ ಪೂರ್ವ ಜಿಲ್ಲೆಯ ಪೊರೊಮ್ಪೇಟೆ ಠಾಣೆಯಲ್ಲಿ ಎರಡೂವರೆ ವರ್ಷ ಹಿಂದೆಯೇ ಎಫ್ಐಆರ್ ದಾಖಲಾದರೂ, ಯುವತಿ ಮೇಲೆ ಅತ್ಯಾಚಾರ ಎಸಗಿದ ಯಾವ ಆರೋಪಿಗಳನ್ನೂ ಇದುವರೆಗೆ ಪತ್ತೆ ಮಾಡುವ ಕಾರ್ಯವೂ ನಡೆದಿಲ್ಲ.
ಬುಡಕಟ್ಟು ಏಕತಾ ಸಮಿತಿ ಸೇರಿದಂತೆ ಕುಕಿ ಝೋ ಸಮುದಾಯದ ಹಲವು ಸಂಘಟನೆಗಳು ಶನಿವಾರ ಈ ಯುವತಿಗೆ ಆಗಿರುವ ಆಘಾತಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಮೊಂಬತ್ತಿ ಮೆರವಣಿಗೆ ನಡೆಸಿದವು.
ಕಳೆದ30 ತಿಂಗಳಿನಿಂದ ಯುವತಿ ದೈಹಿಕ ಹಾಗೂ ಮಾನಸಿಕ ಆಘಾತದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 2023ರ ಜುಲೈ 21ರಂದು ಘಟನೆಯ ಬಗ್ಗೆ ಈಕೆ ಕಂಗ್ಪೋಕಿ ಠಾಣೆಗೆ ದೂರು ನೀಡಿದ್ದರು. ಆಕೆಯನ್ನು ಮೇ 15ರಂದು ಇಂಫಾಲದ ನ್ಯೂಚೆಕಾನ್ ಎಟಿಎಂ ಬೂತ್ ಬಳಿಯಿಂದ ಅಪಹರಿಸಲಾಗಿತ್ತು.







