ಮಣಿಪುರ: ಕೇಂದ್ರ ಸಚಿವ ಆರ್.ಕೆ.ರಂಜನ್ ನಿವಾಸದ ಮೇಲೆ ಮತ್ತೆ ದಾಳಿ

Photo: ಕೇಂದ್ರ ಸಚಿವ ಆರ್.ಕೆ.ರಂಜನ್ | NDTV
ಇಂಫಾಲ: ಕೇಂದ್ರ ಸಚಿವ ಆರ್.ಕೆ.ರಂಜನ್ ಅವರ ಇಂಫಾಲದಲ್ಲಿನ ನಿವಾಸದೆದುರು ನಡೆದ ಮಹಿಳೆಯರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭನಾಕಾರರು ಜನಾಂಗೀಯ ಸಂಘರ್ಷಪೀಡಿತವಾಗಿರುವ ಮಣಿಪುರದ ಕುರಿತು ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿಯು ವಿಕೋಪಕ್ಕೆ ತಿರುಗಿತು ಎಂದು deccanherald.com ವರದಿ ಮಾಡಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರ ನಿವಾಸದ ಮೇಲೆ ದಾಳಿ ನಡೆಯುತ್ತಿರುವುದು ಇದು ಎರಡನೆಯ ಬಾರಿಯಾಗಿದೆ.
ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಮೆರವಣಿಗೆ ನಡೆಸಿದರು. ಮೆರವಣಿಗೆ ನಡೆಸಲು ನೀಡಲಾಗಿದ್ದ ಅನುಮತಿ ಪ್ರದೇಶವನ್ನು ದಾಟಿ ಯುವಕರು ಮುಂದೆ ಹೋಗಿದ್ದರಿಂದ, ಅವರನ್ನು ಚದುರಿಸಲು ಪೊಲೀಸರು ಅವರ ಮೇಲೆ ಅಶ್ರುವಾಯು ಸೆಲ್ ಸಿಡಿಸಿದರು.
ಮೇ 4ರಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊ ಜುಲೈ 19ರಂದು ಕಾಣಿಸಿಕೊಂಡ ನಂತರ ಈ ಘಟನೆಗಳು ನಡೆದಿವೆ. ಈ ಘಟನೆಯ ವಿರುದ್ಧ ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು.
ಹೀಗಿದ್ದೂ, ದಾಳಿಯ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಮನೆಗೆ ಯಾವುದೇ ಗಂಭೀರ ಹಾನಿಯಾಗಿಲ್ಲ.
ಇಂಫಾಲದ ಕೋಂಗ್ಬಾ ಪ್ರದೇಶದಲ್ಲಿನ ಸಚಿವರ ನಿವಾಸದ ಬಳಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಗಳು, ಅಂತರ್ಜಾಲ ಸೇವೆಯನ್ನು ಮರುಸ್ಥಾಪಿಸಬೇಕು ಎಂದೂ ಆಗ್ರಹಿಸಿದ ಪ್ರತಿಭಟನಾಕಾರರನ್ನು ಚದುರಿಸಿದರು.
"ರಾಜ್ಯದಲ್ಲಿನ ಪರಿಸ್ಥಿತಿಯ ಕುರಿತು ಸಚಿವರು ಸಂಸತ್ತಿನಲ್ಲಿ ಮಾತನಾಡಬೇಕು ಎಂದು ನಾವು ಆಗ್ರಹಿಸುತ್ತೇವೆ. ನಮಗೆ ಅಂತರ್ಜಾಲ ಸೇವೆ ಮರುಸ್ಥಾಪನೆಯಾಗಬೇಕು. ನಮಗೇನಾಗುತ್ತಿದೆ ಎಂಬುದನ್ನು ನಾವು ಜನರಿಗೆ ತಿಳಿಸಬೇಕಿದೆ" ಎಂದ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಎರಡು ವಿಭಿನ್ನ ಜನಾಂಗಗಳ ನಡುವೆ ಸಂಘರ್ಷ ಶುರುವಾದ ನಂತರ ಮೊದಲ ಬಾರಿಗೆ ಮೇ 3ರಂದು ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಅಂತರ್ಜಾಲ ಸೇವೆಯನ್ನು ಪ್ರಾಧಿಕಾರಗಳು ನಿಷೇಧಿಸಿದ್ದವು. "ಯಾವುದೇ ಬಗೆಯ ಶಾಂತಿ ಭಂಗ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು" ಕಾಲ ಕಾಲಕ್ಕೆ ಈ ನಿಷೇಧವನ್ನು ವಿಸ್ತರಿಸುತ್ತಾ ಬರಲಾಗುತ್ತಿದೆ.
ಇದಕ್ಕೂ ಮುನ್ನ, ಜೂನ್ 15ರ ರಾತ್ರಿ ಸಚಿವರ ನಿವಾಸದ ಮೇಲೆ ದಾಳಿ ನಡೆಸಿದ್ದ ಗುಂಪೊಂದು, ಅವರ ನಿವಾಸಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿತ್ತು. ಆದರೆ, ಭದ್ರತಾ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಹಚ್ಚುವ ಪ್ರಯತ್ನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ, ಸಚಿವರ ನಿವಾಸವನ್ನು ರಕ್ಷಿಸಿದ್ದರು.







