ಮಣಿಪುರ | ರಾಜ್ಯಾದ್ಯಂತ ಮುಕ್ತ ಸಂಚಾರಕ್ಕೆ ಅಮಿತ್ ಶಾ ನೀಡಿದ್ದ ನಿರ್ದೇಶನಕ್ಕೆ ಸ್ಥಳೀಯರಿಂದ ವಿರೋಧ: ಕಾಂಗ್ಪೋಕ್ಪಿ ಜಿಲ್ಲೆ ಮತ್ತೆ ಉದ್ವಿಗ್ನ

ಇಂಫಾಲ: ಮಾರ್ಚ್ 8ರಿಂದ ರಾಜ್ಯಾದ್ಯಂತ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ನಿರ್ದೇಶನ ಹಾಗೂ ಮೈತೇಯಿ ಸಂಘಟನೆಯ ಶಾಂತಿ ಮೆರವಣಿಗೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ ಹಿನ್ನೆಲೆಯಲ್ಲಿ, ಶನಿವಾರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಭದ್ರತಾ ಸಿಬ್ಬಂದಿಗಳೊಂದಿಗೆ ಘರ್ಷಣೆಗಿಳಿದ ಪ್ರತಿಭಟನಾಕಾರರು, ಅವರತ್ತ ಕಲ್ಲು ತೂರಿದ್ದರಿಂದ ಭದ್ರತಾ ಸಿಬ್ಬಂದಿಗಳು ಗಾಯಗೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲದಿಂದ ಸೇನಾಪತಿ ಜಿಲ್ಲೆಯತ್ತ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆಯುವ ಪ್ರಯತ್ನದ ಭಾಗವಾಗಿ ಪ್ರತಿಭಟನಾಕಾರರು ಕೆಲವು ಖಾಸಗಿ ವಾಹನಗಳಿಗೆ ಬೆಂಕಿಯನ್ನೂ ಹಚ್ಚಿದರು.
ರಾಷ್ಟ್ರೀಯ ಹೆದ್ದಾರಿ 2(ಇಂಫಾಲ-ದಿಮಾಪುರ ಹೆದ್ದಾರಿ)ರಲ್ಲಿ ಟೈರ್ ಗಳಿಗೂ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಯಾವುದೇ ಸರಕಾರಿ ವಾಹನಗಳು ಸಂಚರಿಸದಂತೆ ತಡೆಯೊಡ್ಡಲು ರಸ್ತೆಯ ಮಧ್ಯಭಾಗದಲ್ಲಿ ಜಮಾಯಿಸಿದರು.
ಮೈತೇಯಿ ಸಂಘಟನೆಯಾದ ಫೆಡರೇಶನ್ ಆಫ್ ಸಿವಿಲ್ ಸೊಸೈಟಿ ನಡೆಸುತ್ತಿರುವ ಶಾಂತಿ ಮೆರವಣಿಗೆಯನ್ನೂ ಈ ಪ್ರತಿಭಟನೆ ಗುರಿಯಾಗಿಸಿಕೊಂಡಿತ್ತು. ಆದರೆ, ಕಾಂಗ್ಪೋಕ್ಪಿ ಜಿಲ್ಲೆಯತ್ತ 10 ನಾಲ್ಕು ಚಕ್ರದ ವಾಹನಗಳಲ್ಲಿ ತೆರಳುತ್ತಿದ್ದ ಶಾಂತಿ ಮೆರವಣಿಗೆಯನ್ನು ಭದ್ರತಾ ಪಡೆಗಳು ಸೆಕ್ಮಾಯಿ ಬಳಿ ತಡೆದವು.
ಇದಕ್ಕೂ ಮುನ್ನ, ಅನುಮತಿ ಇಲ್ಲದೆ ಇರುವುದರಿಂದ ಶಾಂತಿ ಮೆರವಣಿಗೆಯನ್ನು ಸ್ಥಗಿತಗೊಳಿಸಬೇಕು ಎಂದು ನಾವು ಅವರಿಗೆ ಸೂಚಿಸಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.







